Index   ವಚನ - 234    Search  
 
ತನುಲಿಂಗವೆಂದೆಂಬ ಅದ್ವೈತಿಯ ಮಾತ ಕೇಳಲಾಗದು. ಮನಲಿಂಗವೆಂದೆಂಬ ಮೂರ್ಖನ ಮಾತ ಕೇಳಲಾಗದು. ಪ್ರಾಣಲಿಂಗವೆಂದೆಂಬ ಪ್ರಪಂಚಿಗಳ ಮಾತ ಕೇಳಲಾಗದು. ತನುಲಿಂಗವಾದರೆ ಹೊನ್ನು ಹೆಣ್ಣು ಮಣ್ಣು ಮೂರೆಂಬ ಅನ್ಯವಿಷಯಕ್ಕೆ ಸಿಲ್ಕಿ ಅನಂತ ಪಾಡಿಗೆ ಗುರಿಯಾಗಬಹುದೇ? ಮನಲಿಂಗವಾದರೆ ಮನವಿಕಾರದ ಭ್ರಮೆಯಲ್ಲಿ ತೊಳಲಿ ಬಳಲಿ ಅಜ್ಞಾನಕ್ಕೆ ಗುರಿಯಾಗಬಹುದೇ? ಪ್ರಾಣಲಿಂಗವಾದರೆ ಪ್ರಳಯಕ್ಕೆ ಗುರಿಯಾಗಿ ಸತ್ತು ಸತ್ತು ಹೂಳಿಸಿಕೊಳಬಹುದೇ? ತನು ಮನ ಪ್ರಾಣಲಿಂಗವಾದರೆ ಜನನ ಮರಣವೆಂಬ ಅಣಲಿಂಗೆ ಗುರಿಯಾಗಿ ನಾನಾ ಯೋನಿಯಲ್ಲಿ ತಿರುಗಬಹುದೇನಯ್ಯಾ? ತನು ಮನ ಪ್ರಾಣವಾ ಘನಮಹಾಲಿಂಗಕ್ಕೆ ಸರಿಯೆಂದು ಅಜ್ಞಾನದಿಂದ ತನುವೆ ಲಿಂಗ ಮನವೆ ಲಿಂಗ ಪ್ರಾಣವೆ ಲಿಂಗವೆಂದು ಇಷ್ಟಲಿಂಗವ ಜರಿದು ನುಡಿವ ಭ್ರಷ್ಟ ಬಿನುಗು ದುರಾಚಾರಿ ಹೊಲೆಯರ ನಾಯಕನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.