Index   ವಚನ - 245    Search  
 
ಪರುಷ ಮನೆಯೊಳಿರುತಿರೆ ಪಾಷಾಣಕೆ ಚಾಲಿವರಿವಂತೆ, ಸುಧೆ ಇರಲು ಅಂಬಲಿ ಬಯಸುವನಂತೆ, ಗುರುಕರುಣದ ಇಷ್ಟಲಿಂಗ ತನ್ನ ಕರದೊಳಿರುತಿರೆ ಅದ ಮರೆದು ಸೂಳೆಗೆ ಹುಟ್ಟಿದ ಮಗುವು ಕಂಡ ಕಂಡವರಿಗೆ 'ಅಪ್ಪಾ' ಎಂದು ಕರೆವಂತೆ, ಈ ಸಂತೆಸೂಳೆಮಕ್ಕಳಿಗೆ ಒಂದು ದೇವರು ನಿತ್ಯವಲ್ಲ! ಹಲವು ಕಲ್ಲಿಗೆರಗಿ ಕುಲಕೋಟಿ ನರಕಕಿಳಿವ ಹೊಲೆಯರ ಮುಖವನೆನಗೊಮ್ಮೆ ತೋರದಿರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.