Index   ವಚನ - 257    Search  
 
ಹರಿಯ ನಯನ ಹರನ ಶ್ರೀಪಾದದೊಳು ಅಡಕವಾದುದ ಸಟೆಯೆಂಬ ವಿಪ್ರ ನೀ ಕೇಳಾ. ಹರಿ ಸಹಸ್ರಕಮಲದಲ್ಲಿ ಹರನ ಶ್ರೀಪಾದದ ಪೂಜೆ ಮಾಡುತಿರೆ, ಒಂದರಳು ಕುಂದಿದರೆ ನಯನಕಮಲವನೇರಿಸಿ, ಶಿವನ ಪಾದಕೃಪೆಯಿಂದ ಶಂಖ ಚಕ್ರವ ಪಡೆದುದು ಹುಸಿಯೆ? ಹುಸಿಯಲ್ಲ. ಮತ್ತೆ ಹೇಳುವೆ ಕೇಳು ದ್ವಿಜ. ಹರಿಯಜರಿಬ್ಬರು ಹರನ ಶ್ರೀಪಾದಮಗುಟವ ಕಾಣ್ಬೆನೆಂದು ವರಗೃಧ್ರಗಳಾದುದು ಸಟೆಯೇ? ಸಾಕ್ಷಿ: “ಯುಗ್ಧಸಂಯುಕ್ತ ಉಭಯ ಚ ದೃಷ್ಟ ಬ್ರಾಹ್ಮಣ ರಾಜಸಬದ್ಧ ವರಗೃಧ್ರ |'' (?) ಎಂದುದಾಗಿ, ಹದ್ದು ಹೆಬ್ಬಂದಿಯಾಗಿ ಶ್ರೀಪರಮಾತ್ಮನ ಮಗುಟಚರಣವ ಕಾಣದೆ ತೊಳಲಿ ಬಳಲುತಿರಲು, ಹರಿಯಜರ ಮಧ್ಯದಲ್ಲಿ ಉರಿಲಿಂಗವಾದ ಪರಮಾತ್ಮನ ನಿಲವನರಿಯದೆ, ಅನ್ಯದೈವವ ತಂದು ಪನ್ನಗಧರಗೆ ಸರಿಯೆಂಬ ಕುನ್ನಿಮಾನವರ ತಲೆಕೆಳಗಾಗಿ ನರಕಕ್ಕೆ ಕೆಡುವುದ ಮಾಣ್ಬನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.