Index   ವಚನ - 266    Search  
 
ಶ್ರೀ ವಿಭೂತಿಯಿಲ್ಲದವನ ಹಣೆಯ ಸುಡುಯೆಂದಿತ್ತು ಪೌರಾಣ. ಶಿವಾಲಯವಿಲ್ಲದ ಗ್ರಾಮವ ಸುಡುಯೆಂದಿತ್ತು ಪೌರಾಣ. ಶಿವಾರ್ಚನೆಯಿಲ್ಲದವನ ಜನ್ಮವ ಸುಡುಯೆಂದಿತ್ತು ಪೌರಾಣ. ಶ್ರೀ ಶಿವಸ್ತುತಿಯಿಲ್ಲದವನ ಆಗಮವ ಸುಡುಯೆಂದಿತ್ತು ಪೌರಾಣ. ಅದು ಎಂತೆಂದರೆ: ಸಾಕ್ಷಿ: “ಧಿಗ್ ಭಸ್ಮರಹಿತಂ ಭಾಳಂ ಧಿಗ್ ಗ್ರಾಮಮಶಿವಾಲಯಂ | ಧಿಗ್ ಗನೀಶ್ರಾಶ್ರಿತಂ ಜನ್ಮ ಧಿಗ್‍ವಿದ್ಯಾಮಶಿವಾಶ್ರಯಾಂ ||'' ಎಂದುದಾಗಿ, ಎಲ್ಲಿ ಲಿಂಗಾರ್ಚನೆಯಿಲ್ಲ, ಎಲ್ಲಿ ತ್ರಿಪುಂಡ್ರವಿಲ್ಲ, ಎಲ್ಲಿ ರುದ್ರಜಪವಿಲ್ಲ ಅವನ ಮನೆ ಹೊಲೆಮಾದಿಗನ ಮನೆಯ ಸರಿಯೆಂದಿತ್ತು ಪೌರಾಣ. ಅದು ಎಂತೆಂದರೆ : ಸಾಕ್ಷಿ: “ಯತ್ರ ಲಿಂಗಾರ್ಚನಂ ನಾಸ್ತಿ | ನಾಸ್ತಿ ಯತ್ರ ತ್ರಿಪುಂಡ್ರಕಂ | ಯತ್ರ ರುದ್ರ ಜಪಂ ನಾಸ್ತಿ | ತತ್‍ಚಾಂಡಾಲ ಗುರೋರ್ಗೃಹಂ ||'' ಹೀಗೆಂಬುದನರಿಯದೆ ವಾಗದ್ವೈತದಿಂದ ಶ್ರೀವಿಭೂತಿಯ ಪೂಸದೆ, ಶ್ರೀರುದ್ರಾಕ್ಷಿಯ ಧರಿಸದೆ, ಶಿವಲಿಂಗದ ಪೂಜೆಯನನುದಿನ ಮಾಡದೆ, ಶಿವನಿರೂಪದಿಂದಲಾವರಣವನರಿಯದೆ, ಶಿವನ ಸಾಧಿಸೇನೆಂಬ ಅಜ್ಞಾನಿಗಳ ಕಂಡು ನಾ ಬೆರಗಾದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.