Index   ವಚನ - 285    Search  
 
ಬಣ್ಣಿಪಲಳವೆ ಶ್ರೀ ಪಂಚಾಕ್ಷರಿ ಉನ್ನತ ಮಹಿಮೆಯ ತ್ರಿಜಗದೊಳಗಂ ಎನ್ನಯ ಬಡಮತಿಯುಳ್ಳಷ್ಟಂ ಇನ್ನಂ ಪೊಗಳ್ವೆ ಸಿದ್ಧಮಲ್ಲನ ಕೃಪೆಯಿಂ. ರಗಳೆ: ಗುರು ಮಹಿಮೆಯನೋಪ ಪಂಚಾಕ್ಷರಿಯು ನಾಗಭೂಷಣನರ್ತಿನಾಮ ಪಂಚಾಕ್ಷರಿಯು | 1 | ನಡೆವುತಂ ನುಡಿವುತಂ ಶಿವನೆ ಪಂಚಾಕ್ಷರಿಯು ಕುಡುತಲಿ ಕೊಂಬುತಲಿ ಹರನೆ ಪಂಚಾಕ್ಷರಿಯು ಉಡುತಲಿ ಉಂಬುತಲಿ ಸದ್ಗುರುವೇ ಪಂಚಾಕ್ಷರಿಯು ಬಿಡದೆ ಜಪಿಸಲು ಸದ್ಯೋನ್ಮುಕ್ತಿ ಪಂಚಾಕ್ಷರಿಯು. | 2 | ಸಟೆ ಠಕ್ಕು ಠೌಳಿಯಲ್ಲಿ ಬಿಡದೆ ಪಂಚಾಕ್ಷರಿಯು ದಿಟಪುಟದಲ್ಲಿ ಆವಾ ಪಂಚಾಕ್ಷರಿಯು ಕುಟಿಲ ವಿಷಯಂಗಳೊಲಿದು ಪಂಚಾಕ್ಷರಿಯು ನಟಿಸಿ ಜಪಿಸಲು ಮುಕ್ತಿ ಈವ ಪಂಚಾಕ್ಷರಿಯು. | 3 | ಮಂತ್ರಯೇಳ್ಕೋಟಿಗೆ ತಾಯಿ ಪಂಚಾಕ್ಷರಿಯು ಅಂತ್ಯಜಾಗ್ರಜ ವಿಪ್ರರೆಲ್ಲ ಪಂಚಾಕ್ಷರಿಯು ಸಂತತಂ ಬಿಡದೆ ಜಪಿಸುವದು ಪಂಚಾಕ್ಷರಿಯು ಎಂತು ಬಣ್ಣಿಪರಳವಲ್ಲ ಪಂಚಾಕ್ಷರಿಯು. | 4 | ಆದಿ ಪಂಚಾಕ್ಷರಿಯು ಅನಾದಿ ಪಂಚಾಕ್ಷರಿಯು ಭೇದ್ಯ ಪಂಚಾಕ್ಷರಿಯು [ಅಭೇದ್ಯ ಪಂಚಾಕ್ಷರಿಯು] ಸಾಧಿಸುವಗೆ ಸತ್ಯ ನಿತ್ಯ ಪಂಚಾಕ್ಷರಿಯು ಬೋಧೆ ಶೃತಿತತಿಗಳಿಗೆ ಮಿಗಿಲು ಪಂಚಾಕ್ಷರಿಯು. | 5 | ಪಂಚಾನನದುತ್ಪತ್ಯದಭವ ಪಂಚಾಕ್ಷರಿಯು ಪಂಚಮಯ ಬ್ರಹ್ಮಮಯಂ ಜಗತ್ ಪಂಚಾಕ್ಷರಿಯು ಪಂಚವಿಂಶತಿತತ್ವಕಾದಿ ಪಂಚಾಕ್ಷರಿಯು ಪಂಚಶತಕೋಟಿ ಭುವನೇಶ ಪಂಚಾಕ್ಷರಿಯು. | 6 | ಹರಿಯಜರ ಗರ್ವವ ಮುರಿವ ಪಂಚಾಕ್ಷರಿಯು ಉರಿಲಿಂಗವಾಗಿ ರಾಜಿಸುವ ಪಂಚಾಕ್ಷರಿಯು ಸ್ಮರಣೆಗೆ ಸರಿಯಿಲ್ಲ ಪ್ರಣಮಪಂಚಾಕ್ಷರಿಯು ಸ್ಮರಿಸುವಾತನೆ ನಿತ್ಯಮುಕ್ತ ಪಂಚಾಕ್ಷರಿಯು. | 7 | ಪರಮ ಮುನಿಗಳ ಕರ್ಣಾಭರಣ ಪಂಚಾಕ್ಷರಿಯು ಹರನ ಸಾಲೋಕ್ಯದ ಪದವನೀವ ಪಂಚಾಕ್ಷರಿಯು ಉರಗತೊಡೆಶಿವನನೊಲಿಸುವರೆ ಪಂಚಾಕ್ಷರಿಯು ಕರ್ಮಗಿರಿಗೊಜ್ರ ಸುಧರ್ಮ ಪಂಚಾಕ್ಷರಿಯು. | 8 | ನಾನಾ ಜನ್ಮದಲ್ಲಿ ಹೊಲೆಯ ಕಳೆವ ಪಂಚಾಕ್ಷರಿಯು ಮನಸ್ಮರಣೆಗೆ ಸರಿಯಿಲ್ಲ ಪಂಚಾಕ್ಷರಿಯು ಜ್ಞಾನವೇದಿಕೆ ಮುಖ್ಯ ಪಂಚಾಕ್ಷರಿಯು ಧ್ಯಾನಿಸುವ ನೆರೆವ ತಾನೆ ಪಂಚಾಕ್ಷರಿಯು. | 9 | ಏನ ಬೇಡಿದಡೀವ ದಾನಿ ಪಂಚಾಕ್ಷರಿಯು ಸ್ವಾನುಜ್ಞಾನದಲ್ಲು[ದಿ]ಸಿದಂಥ ಪಂಚಾಕ್ಷರಿಯು ಭಾನು ಅಘತಿಮಿರಕ್ಕೆ ತಾನೆ ಪಂಚಾಕ್ಷರಿಯು ಕಾನನ ಭವತರುವಹ್ನಿ ಪಂಚಾಕ್ಷರಿಯು.| 10 | ಕ್ಷಿತಿಭುವನಗಳ ಬೇಡಲೀವ ಪಂಚಾಕ್ಷರಿಯು. ಯತಿಗೆ ಯತಿತನವೀವ ಗತಿಯು ಪಂಚಾಕ್ಷರಿಯು ಉನ್ನತ ಸಿದ್ಧತ್ವವನೀವ ಸಿದ್ಧಿ ಪಂಚಾಕ್ಷರಿಯು ಗತಿ ಮೋಕ್ಷಗಳ ಬೇಡೆ ಕುಡುವ ಪಂಚಾಕ್ಷರಿಯು. | 11 | ಅವಲಂಬಿಗೆ ಅವಲಂಬ ಪಂಚಾಕ್ಷರಿಯುನಿ- ರಾವಲಂಬಿಗೆ ನಿರಾವಲಂಬ ಪಂಚಾಕ್ಷರಿಯು ಕಾವ ಸಂಹರ ಭಜಿಪರಿಗೆ ಪಂಚಾಕ್ಷರಿಯು ಮಾವದ್ಯುಮಣಿಧರನನೊಲಿಪ ಪಂಚಾಕ್ಷರಿಯು. | 12 | ಅರಿವರ್ಗಗಳ ಮುರಿವ ಶತೃ ಪಂಚಾಕ್ಷರಿಯು ಕರಿಗಳೆಂಟನು ಹೊಡೆವ ಸಿಂಹ ಪಂಚಾಕ್ಷರಿಯು ಹರಿವ ದಶವಾಯುಗಳನಳಿವ ಪಂಚಾಕ್ಷರಿಯು ನೆರೆ ಸಪ್ತವ್ಯಸನಗಳಿಗೊಹ್ನಿ ಪಂಚಾಕ್ಷರಿಯು. | 13 | ತ್ರಿಗುಣಗಳ ಕೆಡಿಪ ನಿರ್ಗುಣವು ಪಂಚಾಕ್ಷರಿಯು ಅಘವೈದೇಂದ್ರಿಯಕೆ ಲಿಂಗೇಂದ್ರಿಯ ಪಂಚಾಕ್ಷರಿಯು ಮಿಗೆ ಕರ್ಮೇಂದ್ರಿಗಳ ತೆರೆತೆಗೆವ ಪಂಚಾಕ್ಷರಿಯು ಝಗಝಗಿಸಿ ಸರ್ವಾಂಗಪೂರ್ಣ ಪಂಚಾಕ್ಷರಿಯು. | 14 | ಷಡೂರ್ಮಿಗಳ ಗಡವನಳಿವ ಪಂಚಾಕ್ಷರಿಯು ಷಡುಕರ್ಮಗಳ ಮೆಟ್ಟಿನಿಲುವ ಪಂಚಾಕ್ಷರಿಯು ಷಡುವೇಕದಂತಿಗೆ ನಾಥ ಪಂಚಾಕ್ಷರಿಯು ಬಿಡದೆ ಜಪಿಸಿದಡವ ಮುಕ್ತ ಪಂಚಾಕ್ಷರಿಯು. | 15 | ಸಂಸಾರಸಾಗರಕೆ ಹಡಗ ಪಂಚಾಕ್ಷರಿಯು ವಂಶಗಳನಳಿವ ನಿರ್ವಂಶ ಪಂಚಾಕ್ಷರಿಯು ಸಂಶಯವಿಲ್ಲದಲಿ ನಿಸ್ಸಂಶಯ ಪಂಚಾಕ್ಷರಿಯು ವಿಂಶಾರ್ಥ ಬಿಡದೆ ಜಪಿಸುವದು ಪಂಚಾಕ್ಷರಿಯು. | 16 | ಗುರುಕೃಪಕಧಿಕದಿ ಭವದಗ್ಧ ಪಂಚಾಕ್ಷರಿಯು ಕರದ ಲಿಂಗಬೆಳಗು ಪ್ರಣಮಪಂಚಾಕ್ಷರಿಯು ನೆರೆಶ್ರೋತ್ರಬೋಧೆ ನಿರ್ಬೋಧೆ ಪಂಚಾಕ್ಷರಿಯು ನಿರುತ ಜಪಿಸುವನೆ ನಿರಾಪೇಕ್ಷ ಪಂಚಾಕ್ಷರಿಯು. | 17 | ದೀಕ್ಷಾ ಪಂಚಾಕ್ಷರಿಯು ದೀಕ್ಷ ಪಂಚಾಕ್ಷರಿಯು ಮೋಕ್ಷಾ ಪಂಚಾಕ್ಷರಿಯು ಮೋಕ್ಷ ಪಂಚಾಕ್ಷರಿಯು ಶಿಕ್ಷಾ ಪಂಚಾಕ್ಷರಿಯು ಶಿಕ್ಷ ಪಂಚಾಕ್ಷರಿಯು ಭಿಕ್ಷಾ ಪಂಚಾಕ್ಷರಿಯು ಭಿಕ್ಷ ಪಂಚಾಕ್ಷರಿಯು. | 18 | ಚಿದ್ಭಸ್ಮದೊಳುವಾಭರಣ ಪಂಚಾಕ್ಷರಿಯು ಚಿದ್ಮಣಿಗಳ ಸ್ಥಾನ ಸ್ಥಾನ ಪಂಚಾಕ್ಷರಿಯು ಚಿದಂಗ ಸರ್ವದೊಳು ಪೂರ್ಣ ಪಂಚಾಕ್ಷರಿಯು ಚಿದಂಗ ಲಿಂಗಸಂಗಸಂಯೋಗ ಪಂಚಾಕ್ಷರಿಯು. | 19 | ಪಾದಸಲಿಲಂ ಪ್ರಸಾದಾದಿ ಪಂಚಾಕ್ಷರಿಯು ಆದಿಕ್ಷೇತ್ರಕ್ಕೆ ವೀರಶೈವ ಪಂಚಾಕ್ಷರಿಯು ಸಾಧಿಸುವ ಸದ್ಭಕ್ತಿಯನೀವ ಪಂಚಾಕ್ಷರಿಯು ಓದುವಾತನ ವೇದವಿತ್ತು ಪಂಚಾಕ್ಷರಿಯು. | 20 | ಅಷ್ಟಾವರಣಕೆ ಮಹಾಶ್ರೇಷ್ಠ ಪಂಚಾಕ್ಷರಿಯು ದುಷ್ಟನಿಗ್ರಹ ಶಿಷ್ಟಪಾಲ ಪಂಚಾಕ್ಷರಿಯು ಮುಟ್ಟಿ ನೆನದರೆ ಮುಕ್ತಿಸಾರ ಪಂಚಾಕ್ಷರಿಯು ಇಷ್ಟಪ್ರಾಣಭಾವದೀಶ ಪಂಚಾಕ್ಷರಿಯು. | 21 | ಭಕ್ತಿಯುಕ್ತಿಯು ಮಹಾಬೆಳಗು ಪಂಚಾಕ್ಷರಿಯು ನಿತ್ಯನೆನೆವರಿಗೆ ತವರ್ಮನೆಯು ಪಂಚಾಕ್ಷರಿಯು ಸತ್ಯಸದ್ಗುಣಮಣಿಹಾರ ಪಂಚಾಕ್ಷರಿಯು ವಿತ್ತ ಸ್ತ್ರೀ ನಿರಾಸೆ ಮಹೇಶ ಪಂಚಾಕ್ಷರಿಯು. | 22 | ಪರಧನ ಪರಸ್ತ್ರೀಗೆಳಸ ಪಂಚಾಕ್ಷರಿಯು ನಿರುತ ಮಹೇಶ್ವರಾಚಾರ ಪಂಚಾಕ್ಷರಿಯು ಪರಮ ಪ್ರಸಾದಿಸ್ಥಲ ತಾನೆ ಪಂಚಾಕ್ಷರಿಯು. | 23 | ಈ ಪರಿಯ ತೋರೆ ಮಹಾಮೂರುತಿ ಪಂಚಾಕ್ಷರಿಯು ತಾ ಪರಬ್ರಹ್ಮ ನಿನಾದ ಪಂಚಾಕ್ಷರಿಯು | 24 | ತಟ್ಟಿ ಮುಟ್ಟುವ ರುಚಿ ಶಿವಾರ್ಪಣ ಪಂಚಾಕ್ಷರಿಯು ಕೊಟ್ಟುಕೊಂಬುವ ಪ್ರಸಾದಾಂಗ ಪಂಚಾಕ್ಷರಿಯು ನಷ್ಟ ಶರೀರಕೆ ನೈಷ್ಠೆವೀವ ಪಂಚಾಕ್ಷರಿಯು ಭ್ರಷ್ಟ ಅದ್ವೈತಿಗತೀತ ಪಂಚಾಕ್ಷರಿಯು. | 25 | ಸ್ಥೂಲತನುವಿಗೆ ಇಷ್ಟಲಿಂಗ ಪಂಚಾಕ್ಷರಿಯು ಮೇಲೆ ಸೂಕ್ಷ್ಮಕೆ ಪ್ರಾಣಲಿಂಗ ಪಂಚಾಕ್ಷರಿಯು ಲೀಲೆ ಕಾರಣ ಭಾವಲಿಂಗ ಪಂಚಾಕ್ಷರಿಯು ಬಾಳ್ವ ತ್ರಿತನುವಿಗೆ ತ್ರಿಲಿಂಗ ಪಂಚಾಕ್ಷರಿಯು. | 26 | ಪ್ರಾಣಲಿಂಗದ ಹೊಲಬು ತಾನೆ ಪಂಚಾಕ್ಷರಿಯು ಕಾಣಿಸುವ ಇಷ್ಟರೊಳು ಭಾವ ಪಂಚಾಕ್ಷರಿಯು ಮಾಣದೊಳಹೊರಗೆ ಬೆಳಗು ಪಂಚಾಕ್ಷರಿಯು ಕ್ಷೋಣಿಯೊಳು ಮಿಗಿಲೆನಿಪ ಬಿರಿದು ಪಂಚಾಕ್ಷರಿಯು. | 27 | ಆರು ಚಕ್ರಕೆ ಆಧಾರ ಪಂಚಾಕ್ಷರಿಯು ಆರು ಅಧಿದೈವಗಳ ಮೀರ್ದ ಪಂಚಾಕ್ಷರಿಯು ಆರು ವರ್ಣಗಳ ಬಗೆದೋರ್ವ ಪಂಚಾಕ್ಷರಿಯು ಆರು ಚಾಳ್ವೀಸೈದಕ್ಷರಂಗ ಪಂಚಾಕ್ಷರಿಯು. | 28 | ಆರು ಶಕ್ತಿಗಳ ಆರಂಗ ಪಂಚಾಕ್ಷರಿಯು ಆರು ಭಕ್ತಿಗಳ ಚಿದ್ರೂಪ ಪಂಚಾಕ್ಷರಿಯು ಆರು ಲಿಂಗದ ಮೂಲ ಬೇರು ಪಂಚಾಕ್ಷರಿಯು ಆರು ತತ್ವವಿಚಾರ ಪಂಚಾಕ್ಷರಿಯು. | 29 | ಯೋಗಷ್ಟ ಶಿವಮುಖವ ಮಾಡ್ವ ಪಂಚಾಕ್ಷರಿಯು ನಾಗಕುಂಡಲ ಊರ್ಧ್ವವಕ್ತ್ರ ಪಂಚಾಕ್ಷರಿಯು ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಪಂಚಾಕ್ಷರಿಯು ಸಾಗಿಸಿ ಸುಜ್ಞಾನವೀವ ಪಂಚಾಕ್ಷರಿಯು. | 30 | ಇಷ್ಟ ಪ್ರಾಣಲಿಂಗ ಹೊಲಿಗೆ ಪಂಚಾಕ್ಷರಿಯು ಅಷ್ಟದಳಕಮಲದ ಪೀಠ ಪಂಚಾಕ್ಷರಿಯು ದೃಷ್ಟಿ ಅನುಮಿಷಭಾವ ಪಂಚಾಕ್ಷರಿಯು ಕೊಟ್ಟು ಸಲಹುವದಷ್ಟ ಪಂಚಾಕ್ಷರಿಯು. | 31 | ತನು ಸೆಜ್ಜೆ ಪ್ರಾಣವೆ ಲಿಂಗ ಪಂಚಾಕ್ಷರಿಯು ಮನ ಪೂಜಾರಿಯು ಭಾವ ಪುಷ್ಪ ಪಂಚಾಕ್ಷರಿಯು ಇನಿತು ಕೂಡುವುದು ಶಿವಶರಣ ಪಂಚಾಕ್ಷರಿಯು ಬಿನುಗಿಗಳವಡದ ಈ ಸತ್ಯ ಪಂಚಾಕ್ಷರಿಯು. | 32 | ಶರಣಸ್ಥಲದಂಗ ವೈರಾಗ್ಯ ಪಂಚಾಕ್ಷರಿಯು ಶರಣಸತಿ ಲಿಂಗಪತಿ ತಾನೆ ಪಂಚಾಕ್ಷರಿಯು ಶರಣುವೊಕ್ಕರ ಕಾವ ಬಿರಿದು ಪಂಚಾಕ್ಷರಿಯು ಶರಣಗಣರಿಗೆ ಮಾತೆಪಿತನು ಪಂಚಾಕ್ಷರಿಯು. | 33 | ಶರಣಂಗೆ ಸುಜ್ಞಾನದಿರವು ಪಂಚಾಕ್ಷರಿಯು ಶರಣಂಗೆ ಮುಕ್ತಿಯಾಗರವು ಪಂಚಾಕ್ಷರಿಯು ಶರಣಂಗೆ ಭಕ್ತಿಯ ಸೋಪಾನ ಪಂಚಾಕ್ಷರಿಯು ಶರಣಂಗೆ ಪರಮಜಲಕೂಪ ಪಂಚಾಕ್ಷರಿಯು. | 34 | ಶರಣಂಗೆ ಶೈವದ ಗೃಹವು ಪಂಚಾಕ್ಷರಿಯು ಶರಣಂಗೆ ಸುರಧೇನು ಅಮೃತ ಪಂಚಾಕ್ಷರಿಯು ಶರಣಂಗೆ ಕಲ್ಪತರು ಫಲವು ಪಂಚಾಕ್ಷರಿಯು ಶರಣಂಗೆ ಚಿಂತಾಮಣಿ ತಾನೆ ಪಂಚಾಕ್ಷರಿಯು. | 35 | ಶರಣಪದ ಬೇಡುವರಿಗೀವ ಪಂಚಾಕ್ಷರಿಯು ಶರಣ ನಡೆನುಡಿ ಪೂರ್ಣಮಯವು ಪಂಚಾಕ್ಷರಿಯು ಶರಣಂಗೆ ಶಿವನಚ್ಚು ಮೆಚ್ಚು ಪಂಚಾಕ್ಷರಿಯು ಶರಣರ್ದೂಷಣರೆದೆಗಿಚ್ಚು ಪಂಚಾಕ್ಷರಿಯು. | 36 | ಶರಣ ಶಿವಾನಂದ ಜಲಗಡಲು ಪಂಚಾಕ್ಷರಿಯು ಶರಣರ ಶರೀರ ಮೇಲೆ ಹೊದಿಕೆಯು ಪಂಚಾಕ್ಷರಿಯು ಶರಣ ಕೃತ್ಯಕೆ ವೈದ್ಯ ಕಾಣಾ ಪಂಚಾಕ್ಷರಿಯು ಶರಣ ಸುಜ್ಞಾನದರ್ಪಣವು ಪಂಚಾಕ್ಷರಿಯು. | 37 | ಶರಣ ಚಿದ್ರೂಪದ ಬಯಕೆಯಳಿದ ಪಂಚಾಕ್ಷರಿಯು ಶರಣಷ್ಟೈಶ್ವರ್ಯದೊಳಗಿಡದ ಪಂಚಾಕ್ಷರಿಯು ಶರಣಪೂಜಿಸಿ ಫಲವ ಬೇಡು[ವ] ಪಂಚಾಕ್ಷರಿಯು ಶರಣೊಜ್ರಪಂಜರದ ಬಿರಿದು ಪಂಚಾಕ್ಷರಿಯು. | 38 | ಶರಣಾಸೆ ರೋಷವನಳಿವ ಪಂಚಾಕ್ಷರಿಯು ಶರಣಾಸೆಯ ಮೋಹಲತೆ ಚಿವುಟುವ ಪಂಚಾಕ್ಷರಿಯು ಶರಣಜ್ಞಾನದ ತರು ಕುಠಾರ ಪಂಚಾಕ್ಷರಿಯು ಶರಣರುದಯಾಸ್ತಮಾನ ತಾನೆ ಪಂಚಾಕ್ಷರಿಯು. | 39 | ಶರಣರ ನಡೆನುಡಿ ಒಂದು ಮಾಡಿ[ದ] ಪಂಚಾಕ್ಷರಿಯು ಶರಣ ಸಂಸಾರಕಿಕ್ಕಿಡದ ಪಂಚಾಕ್ಷರಿಯು ಶರಣಗುಣ ಚಿಹ್ನಕೊರೆ ಶಿಲೆಯು ಪಂಚಾಕ್ಷರಿಯು ಶರಣರೊಡಗೂಡಿದಾನಂದ ಪಂಚಾಕ್ಷರಿಯು.