Index   ವಚನ - 289    Search  
 
ಗುರುವಾಗಿ ಎನ್ನ ಅನಂತಜನ್ಮದ ಹೊಲೆಯ ಕಳದೆಯಲ್ಲಾ ದೇವಾ! ಲಿಂಗವಾಗಿ ಬಂದು ಎನ್ನ ಕರಸ್ಥಲ ಉರಸ್ಥಲದಲ್ಲಿ ನಿಂದು ಎನ್ನ ಭವಿತನವ ಕಳದೆಯಲ್ಲಾ ದೇವಾ! ಜಂಗಮವಾಗಿ ಬಂದು ಸುಳಿದು ಎನಗೆ ಮೋಕ್ಷಾರ್ಥದ ಬಟ್ಟೆಯ ತೋರಿದೆಯಲ್ಲಾ ದೇವಾ! ವಿಭೂತಿಯಾಗಿ ಬಂದು ಎನ್ನ ಲಲಾಟ ಮುಖ್ಯ ನಾನಾ ಸ್ಥಾನಂಗಳಲ್ಲಿ ನಿಂದೆಯಲ್ಲಾ ದೇವಾ! ರುದ್ರಾಕ್ಷಿಯಾಗಿ ಬಂದು ಕೊರಳು ಮುಖ್ಯ ನಾನಾ ಸ್ಥಾನಂಗಳಲ್ಲಿ ಭೂಷಣವಾಗಿದ್ದೆಯಲ್ಲಾ ದೇವಾ! ಷಡಕ್ಷರಿಯಾಗಿ ಬಂದು ಎನ್ನ ಜಿಹ್ವೆಯಲ್ಲಿ ನೆಲೆಗೊಂಡು `ಓಂ ನಮಃ ಶಿವಾಯ' ಎಂಬ ಪ್ರಣಮ ಪಂಚಾಕ್ಷರಿಯನೆ ಸ್ಮರಿಸುತಿದ್ದೆಯಲ್ಲಾ ದೇವಾ! ಪಾದೋದಕವಾಗಿ ಬಂದು ಎನ್ನ ಅಂಗವ ಚಿನ್ನವ ಮಾಡಿದೆಯಲ್ಲಾ ದೇವಾ! ಪ್ರಸಾದವಾಗಿ ಬಂದು ಎನಗೆ ಮುಕ್ತಿಯ ತೋರಿದೆಯಲ್ಲಾ ದೇವಾ! ಅಷ್ಟಾವರಣದಮುಖದಲ್ಲಿ ಬಂದು ನಿಂದು ಎನ್ನ ಕಷ್ಟಬಡುವ ಭವಂಗಳ ತಪ್ಪಿಸಿ ನಿಂದ ನಿಲವ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.