ಶಿವಂಗೂ ಶಿವಭಕ್ತಂಗೂ ಭಿನ್ನವುಂಟೇ ? ಇಲ್ಲ.
ಅದೇನು ಕಾರಣವೆಂದರೆ ಪ್ರಸಾರವ ಮಾಡಿ ಹೇಳುವೆ ಕೇಳಿರಣ್ಣಾ.
ವೃಕ್ಷಕ್ಕೂ ವೃಕ್ಷದಿಂದಾದ ಫಲಕ್ಕೂ ಭಿನ್ನವುಂಟೇ? ಇಲ್ಲ.
ಅಗ್ನಿಗೂ ಅಗ್ನಿಯಿಂದಾದ ಕಳೆಗೂ ಭಿನ್ನವುಂಟೇ? ಇಲ್ಲ.
ಚಂದ್ರ[0ಗೂ] ಚಂದ್ರನಿಂದಾದ ಕಳೆಗೂ ಭಿನ್ನವುಂಟೇ? ಇಲ್ಲ.
ಶಿವಂಗೂ ಶಿವನಿಂದಾದ ಭಕ್ತಂಗೂ ದೇಹ ಪ್ರಾಣದ ಹಾಗೆ.
ಆದ ಕಾರಣ ಭಕ್ತಗಣ ಷೋಡಶಗಣ ದಶಗಣಂಗಳು
ಮುಖ್ಯವಾದ ಏಳನೂರಾ ಎಪ್ಪತ್ತು ಅಮರಗಣಂಗಳೆಲ್ಲ
ಬಸವಣ್ಣನಿಂದ ಮೋಕ್ಷಪಡೆದರು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.