Index   ವಚನ - 110    Search  
 
ವೇಶಿಯ ಕುಲವ್ಯಾವುದು? ದಾಸಿಯ ಕುಲವ್ಯಾವುದು? ಹಾಸುವಳು ಸೆರಗ ಹದಿನೆಂಟು ಜಾತಿಗೆ. ಹೇಸದೆ ಎಂಜಲತಿಂದು ಹಿರಿದುಕುಲನನ್ನದೆಂದು ಮೆರವೆ ಕಾಸುಗಳ್ಳರಿಗೆ ಕಾತೂರ್ಯವೆ ದೇವಾ? ಈಸು ಮಾತು ಯಾತಕ್ಕೆ ಇಂತಪ್ಪುದಕ್ಕೆ? ದಾಸಿಯಲ್ಲಿ ಗುಣವುಂಟೆ? ವೇಶಿಯಲಿ ಗುಣವುಂಟು. ಸರ್ವಜಾತಿ ಒಂದೆಯೆಂದು ಕಾಬಳು. ಹೇಸಿದ ಬಳಿಕ ಬಿಡಬೇಕು ಹಿಂದಣ ಅವಗುಣವ. ಏಸು ಮಾತನಾಡಿದರೆ ಆಡಬಹುದು ಮಾತಿನಂತೆ ಮನವಿದ್ದರೆ ಈಶ್ವರ ಬೇರೆಯಲ್ಲ. ಈ ಪ್ರಪಂಚಬಿಟ್ಟರೆ ತ್ರಾಸಿನಂತೆ ಸಮಕಟ್ಟು ಆದರೆ ತತ್ವವೇ ಕಟ್ಟಳೆ ನಾಶವಾಗದು ಚಿನ್ನದ ಗಟ್ಟಿ ನಂಬುಗೆಯೆಂಬುದು ಪಾಶದಾಸೆಯ ಬಿಟ್ಟವರಿಗೆ ಸಾಧ್ಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.