Index   ವಚನ - 51    Search  
 
ಅಯ್ಯಾ, ಅನಾದಿ ಚಿನ್ಮಯಲಿಂಗವೆನ್ನ ಕರಸ್ಥಲಕ್ಕೆ ಬಂದುದು ಚೋದ್ಯ ನೋಡಾ! ಅಯ್ಯಾ, ಆಕಾರ ನಿರಾಕಾರ ನಿರಂಜನಲಿಂಗವೆನ್ನ ಕುರಿತು ಗುರುಮುಖದಿಂದ ಸಾಕಾರವಾಗಿ ಬಂದುದೆನಗತಿ ಚೋದ್ಯ ನೋಡಾ. ಸುರೇಂದ್ರಜ ವಿಷ್ಣುಗಳರಿಯದ ಅನುಪಮ ಅಖಂಡ ಅವಿರಳಾನಂದ ಪರಬ್ರಹ್ಮವೆನ್ನನರಿದು ಬಂದುದಾಶ್ಚರ್ಯ ನೋಡಾ! ಆರಾರರಿಯದಪ್ರತಿಮ ಗುರುನಿರಂಜನ ಚನ್ನಬಸವಲಿಂಗ ತಾನೇ ಬಂದ ಪರಿಯ ನೋಡಾ.