Index   ವಚನ - 82    Search  
 
ಗುರುನಿರಂಜನ ಪರಮಕಟಾಕ್ಷಮಣಿಯೆನಗೆ ಸರ್ವಾಚಾರ ಸಂಪತ್ತ ತೋರ ಬಂದುದು ನೋಡಾ. ಆಚಾರಲಿಂಗವಾಗಿ ಶ್ರದ್ಧಾಭಕ್ತಿಯೊಳು ಸುಖಿಸಿ ಎನ್ನ ಸುಚಿತ್ತಹಸ್ತವ ಕೊಳಬಂದ ನೋಡಾ. ಗುರುಲಿಂಗವಾಗಿ ನೈಷ್ಠಿಕಭಕ್ತಿಯೊಳು ಪರಿಣಾಮಿಸಿ ಎನ್ನ ಸುಬುದ್ಧಿಹಸ್ತವ ಕೊಳಬಂದುದು ನೋಡಾ. ಶಿವಲಿಂಗವಾಗಿ ಸಾವಧಾನಭಕ್ತಿಯೊಳು ಆನಂದಿಸಿ ಎನ್ನ ನಿರಹಂಕಾರಹಸ್ತವ ಕೊಳಬಂದುದು ನೋಡಾ. ಜಂಗಮಲಿಂಗವಾಗಿ ಅನುಭಾವಭಕ್ತಿಯೊಳು ಸಂತೋಷಬಟ್ಟು ಎನ್ನ ಸುಮನಹಸ್ತವ ಕೊಳಬಂದುದು ನೋಡಾ. ಪ್ರಸಾದಲಿಂಗವಾಗಿ ಆನಂದಭಕ್ತಿಯೊಳು ಹರುಷಬಟ್ಟು ಎನ್ನ ಸುಜ್ಞಾನಹಸ್ತವ ಕೊಳಬಂದುದು ನೋಡಾ. ಮಹಾಲಿಂಗವಾಗಿ ಸಮರಸಭಕ್ತಿಯೊಳು ತೃಪ್ತಿಬಟ್ಟು ಎನ್ನ ಸದ್ಭಾವಹಸ್ತವ ಕೊಳಬಂದುದು ನೋಡಾ. ಇಂತು ಷಡುಲಿಂಗವಾಗಿ ಷಟ್‍ಸ್ಥಲವನ್ನಿತ್ತು ಷಡುಭಕ್ತಿಯೊಳಾನಂದಿಸಿ ನಿರಂಜನ ಚನ್ನಬಸವಲಿಂಗ ಸಂಬಂಧಿಯೆನಿಸಬಂದುದು ನೋಡಾ.