Index   ವಚನ - 89    Search  
 
ಅಯ್ಯಾ, ಎನ್ನ ಸಂಚಿತಕರ್ಮದಿಂದುಲಿವ ಆಣವಮಲಸಂಬಂಧವ ತೊಳೆದು, ಇಷ್ಟಲಿಂಗ ಸಂಬಂಧವ ಮಾಡಿ ಕ್ರಿಯಾಚಾರಸುಖಿಯೆನಿಸಿತ್ತು ನೋಡಾ ಪಂಚಾಕ್ಷರಿ. ಅಯ್ಯಾ, ಎನ್ನ ಪ್ರಾರಬ್ಧಕರ್ಮದಿಂದುಲಿವ ಮಾಯಾಮಲಸಂಬಂಧವ ತೊಳೆದು, ಪ್ರಾಣಲಿಂಗಸಂಬಂಧವ ಮಾಡಿ ಜ್ಞಾನಾಚಾರಸುಖಿಯೆನಿಸಿತ್ತು ನೋಡಾ ಪಂಚಾಕ್ಷರಿ. ಅಯ್ಯಾ, ಎನ್ನ ಆಗಾಮಿಕರ್ಮದಿಂದುಲಿವ ಕಾರ್ಮಿಕಮಲಸಂಬಂಧವ ತೊಳೆದು ಭಾವಲಿಂಗಸಂಬಂಧವ ಮಾಡಿ ಭಾವಾಚಾರಸುಖಿಯೆನಿಸಿತ್ತು ನೋಡಾ ಪಂಚಾಕ್ಷರಿ. ಇಂತು ಎನ್ನಂಗ ಮನ ಪ್ರಾಣದಲ್ಲಿ ಲಿಂಗಸಂಬಂಧಿಯೆನಿಸಿ ಭಾವ ತುಂಬಿ ನಿರಂಜನ ಚನ್ನಬಸವಲಿಂಗದಲ್ಲಿ ಪರಮಪರಿಣಾಮವ ತೋರಿತ್ತು ನಿರಂತರ ನೋಡಾ ಪಂಚಾಕ್ಷರಿ.