ಅನಾದಿಭಕ್ತನು ಆದಿಗುರುವಿನ ಕೈಯಿಂದೆ ಜನಿಸಿ,
ಆದಿ ಅನಾದಿಯಿಂದತ್ತತ್ತಲಾದ
ಅನುಪಮಲಿಂಗವ ಪಡೆದುಕೊಂಡು ಬಂದ ಬಳಿಕ,
ಆ ಲಿಂಗಕಳಾಚೈತನ್ಯವಾದ ಮಹಾನುಭಾವ ಜಂಗಮವ ಕಂಡು,
ಆ ಜಂಗಮಲಿಂಗ ಗುರುಮೂರ್ತಿಗಳಿಗೆ
ಕಾಯವುಳ್ಳನ್ನಕ್ಕರ ಭಕ್ತಿಯ ಮಾಡೂದು,
ಮನವುಳ್ಳನ್ನಕ್ಕರ ಪೂಜೆಯ ಮಾಡೂದು,
ಭಾವವುಳ್ಳನ್ನಕ್ಕರ ಇಚ್ಫೆಗೆ ಎಡೆ ಮಾಡೂದು
ಇದೇ ಸದ್ಭಕ್ತನಿರವು ಗುರುನಿರಂಜನ ಚನ್ನಬಸವಲಿಂಗದಲ್ಲಿ.