ಮಡುವಿನೊಳು ನಿಂದು ಹರಿವ ನೀರ ಮುಟ್ಟಿ
ಬೇರೊಬ್ಬನ ಕೂಡ ಹಾದರವ ಮಾಡುವಳ ಕಂಡು,
ಬಯಲೊಳಗೆ ನಿಂದು ಎಲ್ಲಗಳು ಅಹುದೆಂದು
ಕೆಟ್ಟ ಕಣ್ಣಿನಿಂದ ಜರಿಯುತಿರ್ದನೊಬ್ಬ ಸುಳ್ಳ.
ಗಾಳಿ ಮೊಟ್ಟೆಯ ಕಟ್ಟಿ ಕಾಳೋರಗನ ಹೆಡೆಯನೆತ್ತಿ
ಮನೆ ಮನೆ ತಿರಿದುಂಡು ಹೋಗಿ ಬರುವನೊಬ್ಬ ಭ್ರಾಂತ.
ಹೆಂಗಸು ಗಂಡಸು ಕಷ್ಟಿಗನು ಇವರ ಕಂಡು
ನಗುತ ಮಾಡಿಕೊಂಡಿರ್ದ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಭಿನ್ನ ಭಕ್ತ.