ಪೂರ್ವದಂದುಗವನಳಿದು ಪುನರ್ಜಾತನಾದ ಬಳಿಕ
ಸೂತಕದ ಪಾತಕದೊಳಿರಲಾಗದು.
ಅದೇನು ಕಾರಣ,
ಪಂಚಾಚಾರಸ್ವರೂಪನಾದ ಆಚಾರಲಿಂಗಸನ್ನಿಹಿತನಾದ ಕಾರಣ.
ಅಷ್ಟ ಕುಶಬ್ದದ ಹೊಲೆಯೊಳಿರಲಾಗದು.
ಅದೇನು ಕಾರಣ,
ಮಂತ್ರಾತ್ಮಕಸ್ವರೂಪವಾದ ಗುರುಲಿಂಗ ಸನ್ನಿಹಿತನಾದ ಕಾರಣ.
ಚಂಚಲ ದೃಷ್ಟಿಯ ವಂಚನಯೊಳಗಿರಲಾಗದು.
ಅದೇನು ಕಾರಣ,
ನಿರೀಕ್ಷಣಾಸ್ವರೂಪವಾದ ಶಿವಲಿಂಗಸನ್ನಿಹಿತನಾದಕಾರಣ.
ತನುವಿನ ದುಸ್ಸಾರಾಯದುನ್ನತಿಯೊಳಿರಲಾಗದು,
ಅದೇನು ಕಾರಣ,
ಯಜನಸ್ವರೂಪವಾದ
ಜಂಗಮಲಿಂಗಸನ್ನಿಹಿತನಾದ ಕಾರಣ.
ಹುಸಿ ಕಳವು ಪಾರದ್ವಾರ ಹಿಂಸಾದಿ
ದುರ್ಗೋಷ್ಠಿಯನಾಲಿಸಲಾಗದು.
ಅದೇನು ಕಾರಣ,
ಸ್ತೌತ್ಯಸ್ವರೂಪವಾದ ಪ್ರಸಾದಲಿಂಗ ಸನ್ನಿಹಿತನಾದ ಕಾರಣ.
ಅಂತರಂಗದಲ್ಲಿ ಗುಣತ್ರಯ ಮದಾವಳಿಯೊಳಿರಲಾಗದು.
ಅದೇನು ಕಾರಣ,
ಪರಮ ಶಾಂತಸ್ವರೂಪವಾದ ಮಹಾಲಿಂಗಸನ್ನಿಹಿತನಾದ ಕಾರಣ.
ಗುರುನಿರಂಜನ ಚನ್ನಬಸವಲಿಂಗವನು ಹಿಂಗಿ ಇರಲಾಗದು.
ಅದೇನು ಕಾರಣ, ತನು ಮನ ಭಾವವ
ಕೊಟ್ಟುಳಿದವನಾದ ಕಾರಣ.