Index   ವಚನ - 225    Search  
 
ಮಠಮಾನ್ಯದಯ್ಯತನದ ಹಿರಿಯರೆನಿಸುವ ಅಟಮಟದಯ್ಯಗಳ ಹಟದ ಕುಟಿಲಗಳ ಪರಿಯ ನೋಡಾ! ತಾವು ದೇವರೆಂದು ಸಕಲ ಭಕ್ತಜನರಿಂದೆ ಪೂಜೆಯ ಕೈಕೊಂಡು ಮೆರೆಯುತಲಿರ್ದು ತಮಗೊಂದು ದೇವರುಂಟೆಂದು, ಈರಣ್ಣ, ಬಸವಣ್ಣ, ಕಲ್ಲಣ್ಣ, ಮಲ್ಲೇಶ, ಜಗುಲಿಯ ಮೇಲೆ ಭುಗಿಭುಗಿಲೆನಿಸುತ್ತ, ಅಪ್ಪ, ಅಜ್ಜ, ಮುತ್ತಯ್ಯನ ಮುಚ್ಚಿದ ಗರ್ದುಗೆಯೆಂದು, ಹಾವುಗೆ ಬೆತ್ತ ಪುರಾಣ ಧೂಳತಾದಿಗಳಿಂಗೆ ನೇಮಿಸಿದ ವಾರ ತಿಥಿವಿಡಿದರ್ಚಿಸಿ, ಕಾಯಿ ಫಲ ಕೂಳ ತೋರಿ ತೋರಿ ತಿಂಬುವ ನಾಯಿಭವಿಗಳನೆಂತು ದೇವರೆಂದು ಪೂಜಿಸಬಹುದು! ಕಾಲತೊಳೆದ ನೀರು, ತಿಂದ ಕೂಳು ಇವನೆಂತು ಘನವೆನ್ನಬಹುದು! ಮತ್ತೆ ಮನೆಯೊಳಗೆ ಸತ್ತವರಿಗೆಂದು, ಕರಿಮರಿಯಮ್ಮಗೆಂದು, ಲಕ್ಕಿಜಕ್ಕಣೆರಿಗೆಂದು ಹಚ್ಚಡ ಸೀರೆ ಕುಪ್ಪಸಾದಿಗಳ ತಂದು ಹುಣ್ಣಿವೆ, ಅಮವಾಸ್ಯೆಗೆ ವಸ್ತ್ರವಿಡಿದು ಮಾಡಿ, ಕರ್ಮಕಾಟವ ಕಳೆದು ಗೆದ್ದೆವೆಂಬ ಮೂಳ ಹೊಲೆಯರು ತಾವು ದೇವರೆನ್ನಬಹುದೆ? ಇಂಥ ಕಾಳಕೂಳರಿಗೆ ಮಾಡಿದ ದುರ್ಗತಿ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.