Index   ವಚನ - 254    Search  
 
ಸಹಜಭಕ್ತರಿಂದೆ ಮಾಜದೆ ಪೂಜೆಗೊಂಬ ಒಡೆಯರು ತಾವಾದಬಳಿಕ, ಮೂಜಗವಪ್ಪಿ, ಶಿವಶರಣರಪ್ಪಿ, ಮಾಯಾಮಲವಿರಹಿತರಾಗಿ, ಭಕ್ತಿ ಜ್ಞಾನ ವೈರಾಗ್ಯವೇ ಮುಂದುಗೊಂಡು ಲೀಲೆಯುಳ್ಳನ್ನಬರ ಆಚರಿಸಬೇಕಲ್ಲದೆ, ಕಾಯವನು ಮಣ್ಣಿನೊಳು ಸಿಕ್ಕಿಸಿ ಕೋಟಲೆಗೊಳ್ಳುತ್ತ, ಕರಣವನು ಹೆಣ್ಣಿನ ವಿಷಯವಿಕಾರಭ್ರಾಂತಿಗೊಳಿಸುತ್ತ, ಆತ್ಮನನುಳಿದು ದುಸ್ಸಂಸಾರ ಪ್ರಪಂಚದೊಳು ಮುಳುಗಿಸಿ ಕಳವಳಿಸುತ್ತ, ದುಷ್ಕರ್ಮ ಗಳಿಸಿ ಭವರಾಟಣಂಗೈವ ನರಕಿಗಳಿಗೆತ್ತಣ ದೇವತ್ವವಯ್ಯಾ, ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ ದುರ್ಮತಿಗಳಿಗೆ.