Index   ವಚನ - 275    Search  
 
ಅನಾದಿಸಂಸಿದ್ಧ ನಿರಂಜನಗುರುಲಿಂಗದಿಂದುದಯವಾದ ವೀರಮಾಹೇಶ್ವರನು, ತಾಯಿ ತಂದೆಯಿಂದೆ ಹುಟ್ಟಿದವನೆಂದು ಬಂಧುಪ್ರಿಯನಲ್ಲ. ಹರಿಯಜರರಿತಕ್ಕಗೋಚರವಾದ ಪರಮಲಿಂಗವು ಕರಕಮಲದಲ್ಲೊಪ್ಪುತಿಪ್ಪುದಾಗಿ, ಅನ್ಯದೈವವೆಂಬ ಜಂಗುಳಿಗಳ ಕುಕ್ಕುರಾಳಿಯೆಂದು ಕಾಂಬುವ. ಕರಸ್ಥಲದ ಲಿಂಗಕ್ಕೆ ಮನ ಕರಣಂಗಳ ಮಾರುಗೊಟ್ಟವನಾಗಿ, ಮಾನಿನಿಯರ ಮರುಕಾಳಿಗೆರ್ದು ಪಿಶಾಚಿಯಾಚರಿಯೆಂದು ತಿಳಿವ. ಗುರುಚರಲಿಂಗ ಭಸಿತಾಕ್ಷಿಮಣಿಮಂತ್ರ, ಚರಣಜಲಶೇಷ ಪ್ರಾಣವಾದಕಾರಣ, ಹೇಮ ರಜತಾಭರಣವ ಹೇಯವ ಮಾಡಿ ಜರೆವ. ಸಕಲದಾಸೋಹಿ ತಾನಾಗಿ, ಆದಿ ಮಧ್ಯ ಅವಸಾನವರಿದರಿದಾನಂದಮುಖನಾದ ಕಾರಣ, ಅನ್ಯೋಪಾಧಿಡಂಭಕದನುಸರಣೆಗಳೆಲ್ಲ ಅಪಾತ್ರವೆಂದು ಅರಿದು ಬಿಡುವ. ಇಂತಪ್ಪ ಭಕ್ತಿ ಜ್ಞಾನ ವೈರಾಗ್ಯಸ್ವರೂಪವಾದ ವೀರಮಾಹೇಶ್ವರಂಗೆ ನಮೋ ನಮೋ ಎಂದು ಬದುಕುವೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.