Index   ವಚನ - 296    Search  
 
ಬಿಂದುಪ್ರಕಾಶ ನಾದಪ್ರಕಾಶ ಕಲಾಪ್ರಕಾಶ ಭಾವಪ್ರಕಾಶವನವಧರಿಸಿದ ಅಚ್ಚಮಹೇಶ್ವರನ ಮಹದರುವಿನ ಮುಂದೆ, ಕಾಮಾದಿ ಷಡ್ವರ್ಗಂಗಳಳಿದುಳಿದು ಬಂದು ಶರಣೆನುತ್ತಿಹವು, ಅಸ್ತಿತೆಯಾದಿ ಷಡ್ಭಾವವಿಕಾರಂಗಳೆಲ್ಲ ಅಳಿದುಳಿದು ಮಹಾನುಭಾವಕ್ಕೆ ಆಸ್ಪದವಾಗಿಹವು. ಪಂಚೇಂದ್ರಿಯಂಗಳಳಿದುಳಿದು ಪೂರ್ವದವರ ಮೇಲೆ ಶಸ್ತ್ರವ ಪಿಡಿದು ಶರಣೆನುತ್ತಿಹವು. ದಶವಾಯುಗಳೆಲ್ಲ ಅಳಿದುಳಿದು ಪೂರ್ವದವರ ಮೇಲೆ ಮುನಿದು ನಮೋ ನಮೋ ಎನುತ್ತಿಹವು. ಕರಣ ಸಮೂಹಂಗಳಳಿದುಳಿದು ಸಹಾಯಿಗಳಾಗಿ ಶರಣೆನುತ್ತಿಹವು. ಕರ್ಮೇಂದ್ರಿಯಂಗಳಳಿದುಳಿದು ಸದ್ಭಕ್ತರಾಗಿ ಸೇವೆಯನೆಸಗುತ್ತಿಹವು. ಪಂಚವಿಷಯಂಗಳಳಿದುಳಿದು ಸುಖವದೋರಿ ಆನಂದಿಸುತ್ತಿಹವು. ಇಂತು ಸಕಲಸನುಮತಸಂಬಂಧಿ ಗುರುನಿರಂಜನ ಚನ್ನಬಸವಲಿಂಗ.