Index   ವಚನ - 338    Search  
 
ಕ್ರಿಯಾಘನಗುರುವಿನಿಂದೊಗೆದು ಪಂಚಾಚಾರಸ್ವರೂಪವನು ಕರ ಮನ ಭಾವದಲ್ಲಿ ಧರಿಸಿ, ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರಮಾರ್ಗವಿಡಿಯದುಳಿದು ಸ್ಥೂಲತನುವಿನಲ್ಲಿ ಆಣವಮಲಸಂಗ ಹಿಂಗದೆ, ನಾನು ಶುದ್ಧಪ್ರಸಾದಿಯೆಂದು ಸೂಕ್ಷ್ಮ ತನುವಿನಲ್ಲಿ ಮಾಯಾಮಲಯೋಗ ಹಿಂಗದೆ, ನಾನು ಸಿದ್ಧಪ್ರಸಾದಿಯೆಂದು, ಕಾರಣ ತನುವಿನಲ್ಲಿ ಕಾರ್ಮಿಕಮಲಸಂಬಂಧ ಹಿಂಗದೆ, ನಾನು ಪ್ರಸಿದ್ಧಪ್ರಸಾದಿಯೆಂದು ನುಡಿಯುತಿಪ್ಪರಲ್ಲ! ನುಡಿವ ನಾಲಿಗೆ, ನುಡಿಸುವ ಮನ, ಎಚ್ಚರಿಸುವ ಅರಿವು, ಇವು ಯಾತಕ್ಕೆ ಬಾತೆಯಯ್ಯಾ? ಇವು ಹಿಡಿದು ನಡೆವ ಜೀವನಿಗೆ ನಿರಿಯಾಮಾರ್ಗ ತಪ್ಪುವ ಬಗೆಯೆಂತು? ನಿರಂತರದುಃಖಿಗಳು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.