Index   ವಚನ - 379    Search  
 
ಗುರುಪ್ರಸಾದಿಯೆನಿಸಿಕೊಂಡಬಳಿಕ ತನ್ನ ಕಾಯವನುಪಚಾರದನುಕೂಲಿಗಲಸಿದರೆ ಆ ಕಾಯ ಮಾಯೋಚ್ಛಿಷ್ಟ. ಲಿಂಗಪ್ರಸಾದಿಯೆನಿಸಿಕೊಂಡಬಳಿಕ ತನ್ನ ಕರಣವ ಮಂತ್ರಧ್ಯಾನ ಜಪಸ್ತೋತ್ರೋಪಚಾರದನುಕೂಲಿಗಲಸಿದರೆ ಆ ಕರಣ ಮಾಯೋಚ್ಛಿಷ್ಟ. ಜಂಗಮಪ್ರಸಾದಿಯೆನಿಸಿಕೊಂಡಬಳಿಕ ತನ್ನಾತ್ಮವನು ದಾಸೋಹದುಪಚಾರದನುಕೂಲಿಗಲಸಿದರೆ ಆ ಆತ್ಮನು ಮಾಯೋಚ್ಛಿಷ್ಟ. ಇಂತು ತ್ರಿವಿಧ ಪ್ರಸಾದಿಗಳೆನಿಸಿಕೊಂಡಬಳಿಕ ತ್ರಿವಿಧಕ್ಕನುಕೂಲಿಯಾಗದಿರ್ದಡೆ ತ್ರಿವಿಧೋಚ್ಛಿಷ್ಟ. ತ್ರಿವಿಧೋಚ್ಛಿಷ್ಟವಾದ ಜೀವನಿಗೆ ನಾಯಕ ನರಕ ತಪ್ಪದು ಕಾಣಾ ಗುರುನಿರಂಜನ ಚನ್ನ ಬಸವಲಿಂಗಾ.