Index   ವಚನ - 382    Search  
 
ಮಿಥ್ಯವಿಲ್ಲದ ಭಕ್ತನ ಭಾವ ನಿತ್ಯ ಜಂಗಮಾರ್ಚನೆಯನೆ ಮುಂದುಗೊಂಡಿಪ್ಪುದು. ಭೃತ್ಯತ್ವವೆಂಬ ರತ್ನಾಂಬರವ ಹೊದ್ದು ಕರ್ತೃಗಳಡಿಯನು ಕೂಡಿದ ಕರದ ಮೇಲೆ ಕುಡಿನೋಟ ಬಿಡದಿಹುದು, ಸತ್ಯ ಪದಾರ್ಥವ ನೀಡಿ ಮಿಕ್ಕುದಕ್ಕೆಳಸಲಲ್ಲಿಟ್ಟಿಹನು ಚಿತ್ತವ. ಒಡೆಯರಿಂಗಿತವನರಿಯಲಿಟ್ಟಿಹನು ಮನವ. ಸಮತೋಪಚಾರ ಸಮರಸ ನುಡಿಯನನುಕೂಲಿಗಿಟ್ಟಿಹನು ಗುರುಚರಲಿಂಗ. ಎನ್ನ ಪ್ರಾಣವೆಂಬುದ ಸುಜ್ಞಾನದಲ್ಲಿಟ್ಟಿಹನು ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ.