ಪೃಥ್ವಿಯ ಹಿಡಿದು ಆಚಾರಲಿಂಗಾನುಭಾವಿಯಾಗಿ
ಗಂಧಪ್ರಸಾದವ ಕಂಡು ಸುಖಿಯಾದೆನಯ್ಯಾ.
ಸಲಿಲವಿಡಿದು ಗುರುಲಿಂಗಾನುಭಾವಿಯಾಗಿ
ರಸಪ್ರಸಾದವ ಕಂಡು ಸುಖಿಯಾದೆನಯ್ಯಾ.
ತೇಜವಿಡಿದು ಶಿವಲಿಂಗಾನುಭಾವಿಯಾಗಿ
ರೂಪುಪ್ರಸಾದವ ಕಂಡು ಸುಖಿಯಾದೆನಯ್ಯಾ.
ವಾಯುವಿಡಿದು ಜಂಗಮಲಿಂಗಾನುಭಾವಿಯಾಗಿ
ಸ್ಪರ್ಶನಪ್ರಸಾದವ ಕಂಡು ಸುಖಿಯಾದೆನಯ್ಯಾ.
ಆಕಾಶವಿಡಿದು ಪ್ರಸಾದಲಿಂಗಾನುಭಾವಿಯಾಗಿ
ಶಬ್ದ ಪ್ರಸಾದವ ಕಂಡು ಸುಖಿಯಾದೆನಯ್ಯಾ.
ತತ್ವವಿಡಿದು ಪರತತ್ವಾನುಭಾವಿಯಾಗಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ
ತೃಪ್ತಿಪ್ರಸಾದವ ಕಂಡು ನಿರಂತರ ಸುಖಿಯಾದೆನಯ್ಯಾ.