ಅಯ್ಯಾ, ನಿಮ್ಮ ಕಾಯದನುವಿಡಿದಖಿಳಸುಖವ
ನಿಮ್ಮ ಲಾಂಛನಕ್ಕೀಯದೆ ಎನ್ನ ಪೂರ್ವಪ್ರಕೃತಿಗಿತ್ತೆನ್ನ
ಸುಖವನರಿದೆನಾದರೆ
ಮುಂದೆ ಕಿಲ್ಬಿಷದಗತಿಯೆಂಬುದ ಬಲ್ಲೆನಯ್ಯಾ.
ಅಯ್ಯಾ, ನಿಮ್ಮ ಮನದನುವಿಡಿದಖಿಳಸುಖವ
ನಿಮ್ಮ ಲಾಂಛನಕ್ಕೀಯದೆ ಪೂರ್ವಪ್ರಕೃತಿಗಿತ್ತೆನ್ನ
ಸುಖವನರಿದೆನಾದರೆ
ಮುಂದೆ ನರಕದಗತಿಯೆಂಬುದ ಬಲ್ಲೆನಯ್ಯಾ.
ಅಯ್ಯಾ. ನಿಮ್ಮ ಲಾಂಛನಕ್ಕೀಯದೆ ಪೂರ್ವಪ್ರಕೃತಿಗಿತ್ತೆನ್ನ
ಸುಖವನರಿದೆನಾದರೆ
ಮುಂದೆ ವೈತರಣಿಗತಿಯೆಂಬುದ ಬಲ್ಲೆನಯ್ಯಾ.
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮಾತ್ಮದಿ ಸಕಲತತ್ವಯುಕ್ತಸೌಖ್ಯವ
ನಿಮಗೀಯದೆ ಸುಖಿಸಿದರೆ
ಅಘೋರನರಕವೆಂಬುದ ಕಂಡು ಕೇಳಿ
ಮೊರೆಹೊಕ್ಕು ಮಾಡಿದೆನಯ್ಯಾ.