Index   ವಚನ - 435    Search  
 
ಪಂಚವಣ್ಣಿಗೆ ಪಟ್ಟಣ ಪಂಚಮಾಲುಪೂರ್ಣ ಪೇಟೆಯಲ್ಲಿ ಹರದರನಂತರ ಕೊಳುಕೊಡೆ ಕಡೆ ಮೊದಲಿಲ್ಲ ನೋಡುವ ಬನ್ನಿರೆ. ಅರಿಷಿಣ ಬೆಳ್ಳೊಳ್ಳಿ ಗುಗ್ಗಳ ಚಂದನ ವೀಳ್ಯೆದೆಲೆ ಲವಂಗ ಪತ್ರಿ ಜಾಜಿಕಾಯಿ ಖಾರೀಕ ಮಾರುವದೊಂದು ಮಳಿಗೆಸಾಲು ಕೊರತೆಯಾಗದೆ ತಿಳಿಯಿರೆಯಮ್ಮ. ಕಲ್ಲುಸಕ್ಕರೆ ಜೇನುತುಪ್ಪ ನೆಲ್ಲಿಯಕಾಯಿ ಬೆಟ್ಟಡಕೆ ಮೆಣಸು ಶುಂಠಿ ಸೋಲು ಹುಣಸೆಫಳ ಕಾಚುಗರಳ ಮಾರುವದೊಂದು ಮಳಿಗೆಸಾಲು ಮನವೊಪ್ಪಿ ಅರಿಯಿರೆಯಮ್ಮ. ಹೊನ್ನು ಬಂಗಾರ ಬೆಳ್ಳಿ ಮುತ್ತು ಪವಳ ನಾರಂಜಿ ಪಚ್ಚ ಪಸುರುಂಬರ ನೀಲ ಕಸ್ತೂರಿಗಳೊಪ್ಪಿ ಮಾರುವದೊಂದು ಮಳಿಗೆಸಾಲು ಇರ್ದಂತೆ ನೋಡಿರೆಯಮ್ಮ. ತಟ್ಟು ಕಂಬಳಿ ಕುಸುಮಸುಪ್ಪತ್ತಿಗೆ ಸೂರ್ಯಚಂದ್ರ ಬಿಸಿಲು ಉರಿ ಬೆಳಗು ಇರುಳು ಬೆಳದಿಂಗಳವಿಡಿದು ಕಾಜುಕಪ್ಪೆ ಮುಟ್ಟಿ ಮಾರುವದೊಂದು ಮಳಿಗೆಸಾಲು ಕಾಣಿರೆಯಮ್ಮ. ಕಂಚುಗಳು ಕಾರ್ಬೊನ್ನದೆಳೆದೊಗಲು ಕಾಷ್ಠಗೂಡಿ ಕೊಂಬು ಶಂಖ ಮಾತುಮಾತಿನಿಂದೆ ಮಾರುವದೊಂದು ಮಳಿಗೆಸಾಲು ಕೇಳಿರೆಯಮ್ಮ. ತರುಮೂಲ ಹಣ್ಣು ಬೆಲ್ಲಾದಿ ಹಾಗಲಫಲಗಸೆ ತಾಳಾದಿ ವಚನಗಳಿನಿತು ಪರಿಣಾಮಗೊಂಡು ಮಾರುವದೊಂದು ಮಳಿಗೆಸಾಲು ಸಂತೋಷ ಕಾಣಿರಮ್ಮ. ಇಂತಪ್ಪ ಪುರದ ಬಾಜಾರ ನೆರವಿಯೊಳಿಪ್ಪ ಶೆಟ್ಟಿ ಎಮ್ಮ ಕೈಪಿಡಿದರೆ ಚೌಕ ಚಾವಡಿಯಲ್ಲಿ ನಮ್ಮ ನಮ್ಮ ಗಂಡರ ನಂಟು ಬಲಿಸಿದರೆ ಕಂಟಕವಿಲ್ಲದೆ ಕಾಣಿಸಬಹುದು ಗುರುನಿರಂಜನ ಚನ್ನಬಸವಲಿಂಗ ಪ್ರಸಾದಸುಖಪದವ.