Index   ವಚನ - 434    Search  
 
ನಾಸಿಕದಲ್ಲಿ ಆಚಾರಲಿಂಗವನರಿದರ್ಪಿಸಿಕೊಂಡು ಅನ್ಯವಾಸನೆಯ ನೆನೆವ ಮನ ಶೂನ್ಯ ಕಾಣಾ. ಜಿಹ್ವೆಯಲ್ಲಿ ಗುರುಲಿಂಗವನರಿದರ್ಪಿಸಿಕೊಂಡು ಅನ್ಯರುಚಿಯ ಭಾವಿಪ ಮನ ಶೂನ್ಯ ಕಾಣಾ. ನೇತ್ರದಲ್ಲಿ ಶಿವಲಿಂಗವನರಿದರ್ಪಿಸಿಕೊಂಡು ಅನ್ಯದೃಷ್ಟಿಗೆಳಸುವ ಮನವಿರಹಿತ ಕಾಣಾ. ತ್ವಕ್ಕಿನಲ್ಲಿ ಜಂಗಮಲಿಂಗವನರಿದರ್ಪಿಸಿಕೊಂಡು ಅನ್ಯಸ್ಪರ್ಶನಕ್ಕಾಸ್ಪದವಾದ ಮನ ನಾಸ್ತಿ ಕಾಣಾ. ಶೋತ್ರದಲ್ಲಿ ಪ್ರಸಾದಲಿಂಗವನರಿದರ್ಪಿಸಿಕೊಂಡು ಅನ್ಯಶಬ್ದರಮಿಸಲು ಮನವಿಲ್ಲ ಕಾಣಾ. ಹೃದಯದಲ್ಲಿ ಮಹಾಲಿಂಗವನರಿದರ್ಪಿಸಿಕೊಂಡು ಅನ್ಯಪರಿಣಾಮಕ್ಕೆಳಸುವ ಮನವಿರಹಿತ ಕಾಣಾ. ಕಾಯ ಕಾರಣ ಪ್ರಾಣಶೂನ್ಯ ಲಿಂಗಮಯ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಪ್ರಸಾದಿ.