Index   ವಚನ - 445    Search  
 
ಚರಲಿಂಗ ಗುರುಹಿರಿಯರ ಜರಿಯಬಾರದೆಂದು ಹೇಳುವಿರಿ. ಬಾಳೆಯೆಲೆಯಮೇಲೆ ತುಪ್ಪವತೊಡದಂತೆ, ನಿಮ್ಮ ಔದುಂಬಫಳ ಛಾಯ ನುಡಿಯ ತೆಗೆದಿಡಿರಿ. ಜಂಗಮಲಿಂಗ ಗುರುಹಿರಿಯರನರಸುವರೆ ಜ್ಞಾನಿಗಳು? ಅವರ ಕಾಯ್ದಿಪ್ಪ ತನು ಮನ ಭಾವ ವಿಕೃತಿಯನರಸುವರಲ್ಲದೆ. ಅದೇನು ಕಾರಣವೆಂದೊಡೆ: ತನು ಮನ ಭಾವವಿಡಿದಿರ್ಪ ಜನರನ್ನು ಒಂದು ವೇಳೆ ತಿಳಿಸಿಕೊಳ್ಳಬಹುದು; ಅಳಿದುಳಿದಂಗಲಿಂಗಸಂಬಂಧಿಗಳೆಂದು ನುಡಿದು ಅಳಿದಲ್ಲಿ ಉಳಿದರೆ ಅದು ಮಲದೇಹಿ, ಮರಳಿ ಶುದ್ಧವಾಗದು ನೋಡಾ. ಹೇಮ ಮೌಕ್ತಿಕದಂತೆ ಅರಿದಾಚರಿಸುವುದು ಗುರುನಿರಂಜನ ಚನ್ನಬಸವಲಿಂಗ ಪ್ರಸಾದಿಯಾಗಬೇಕಾದರೆ.