ಅಯ್ಯಾ, ಎನ್ನ ಸ್ಥೂಲತತ್ವದಲ್ಲಿ ದ್ವಾದಶಕಳೆಯೊಳು ನಿಂದು
ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು
ಸತ್ಕ್ರಿಯಾನುಭಾವದಿಂದೆ ಕಾಯದ ಕರಸ್ಥಲದಲ್ಲಿಟ್ಟು
ಅಷ್ಟವಿಧಾರ್ಚನೆಯ ಮಾಡಿ,
ಕಂಗಳಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ.
ಅಯ್ಯಾ, ಎನ್ನ ಸೂಕ್ಷ್ಮ ತತ್ವದಲ್ಲಿ ಷೋಡಶಕಳೆಯೊಳು ನಿಂದು
ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು
ಸಮ್ಯಕ್ ಜ್ಞಾನಾನುಭಾವದಿಂದೆ ಮನದ ಕರಸ್ಥಲದಲ್ಲಿಟ್ಟು
ಅಷ್ಟವಿಧಾರ್ಚನೆಯ ಮಾಡಿ ಮನದಾರತಿಯನೆತ್ತಿ
ಮಂಗಳ ಜಯ ಜಯವೆನುತಿರ್ದೆನಯ್ಯಾ.
ಅಯ್ಯಾ, ಎನ್ನ ಕಾರಣತತ್ವದಲ್ಲಿ ದಶಕಳೆಯೊಳು ನಿಂದು
ಅನಂತಕೋಟಿ ಪ್ರಕಾಶವಾಗಿ ತೋರುವ ಪ್ರಾಣಲಿಂಗವನು
ಮಹಾಜ್ಞಾನಾನುಭಾವದಿಂದೆ ಭಾವದ ಕರಸ್ಥಲದಲ್ಲಿಟ್ಟು
ಅಷ್ಟವಿಧಾರ್ಚನೆಯ ಮಾಡಿ ಭಾವದಾರತಿಯನೆತ್ತಿ
ಮಂಗಳ ಜಯ ಜಯವೆನುತಿರ್ದೆನಯ್ಯಾ.
ಅಯ್ಯಾ, ಎನ್ನ ಸರ್ವಾಂಗದಲ್ಲಿ ಮೂವತ್ತೆಂಟು ಕಳಾತೀತನಾಗಿ
ಅಗಣಿತಕೋಟಿಪ್ರಕಾಶಮಯದಿಂದೊಪ್ಪುವ
ಗುರುನಿರಂಜನ ಚನ್ನಬಸವಲಿಂಗವೆಂಬ ಪ್ರಾಣಲಿಂಗವನು
ಮಹದರುವಿನ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ
ಜ್ಞಾನದಾರತಿಯನೆತ್ತಿ ಮಂಗಳ
ಜಯ ಜಯವೆನುತಿರ್ದೆನಯ್ಯಾ.