Index   ವಚನ - 1284    Search  
 
ನಿಜವರಿಯದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದವಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ಸುಳುಹು ಜಗದಲ್ಲಿ ಸುಳಿವು. ಹೊರವೇಷದ ಜಂಗಮಕ್ಕೆ ವಿಪರೀತ ಚರಿತ್ರವದು ಸರ್ವರಿಗೆ ಪ್ರಕಟವಲ್ಲ ನೋಡಾ! ಸಂಸಾರಿಗಳು ಬಳಸುವ ಬಳಕೆಯನೆಂದೂ ಹೊದ್ದನು. ಇದನರಿಯದೆ ಸಟೆಯ, ಹಿಡಿದು ದಿಟವಮರದು, ಇಲ್ಲದ ಲಿಂಗವನುಂಟೆಂದು ಪೂಜಿಸುವರಾಗಿ ಆಚಾರವುಂಟು, ಆಚಾರವುಳ್ಳವಂಗೆ ಗುರುವುಂಟು, ಗುರುವುಳ್ಳವಂಗೆ ಲಿಂಗವುಂಟು, ಲಿಂಗಪೂಜಕರಿಗೆ ಭೋಗವುಂಟು. ಈ ಬರಿವಾಯ ವಂಚಕರೆಲ್ಲರೂ ಪೂಜಕರಾದರು. ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು ಈ ವೇಷಲಾಂಛನರೆತ್ತ ಬಲ್ಲರು ಹೇಳಯ್ಯ ಸಂಗನಬಸವಣ್ಣಾ.