Index   ವಚನ - 561    Search  
 
ಅರಿಯಬಾರದ ನೋಡಬಾರದ ಕೂಡಬಾರದ ಅಗಲಬಾರದ ಅವಿರಳಲಿಂಗವನು, ಅಂಗ ಮನ ಭಾವದಲ್ಲರಿದ ಅನುಪಮ ಶರಣನ ನಾಸಿಕದಲ್ಲಿ ಬೆಳಗು ನಿಂದು ವಾಸನೆಯನರಿಯದು. ಜಿಹ್ವೆಯಲಿ ಬೆಳಗು ನಿಂದು ರುಚಿಯನರಿಯದು. ನೇತ್ರದಲ್ಲಿ ಬೆಳಗು ನಿಂದು ರೂಪವನರಿಯದು. ತ್ವಕ್ಕಿನಲ್ಲಿ ಬೆಳಗು ನಿಂದು ಸ್ಪರ್ಶವನನರಿಯದು. ಶ್ರೋತ್ರದಲ್ಲಿ ಬೆಳಗು ನಿಂದು ಶಬ್ದವನರಿಯದು. ಹೃದಯದಲ್ಲಿ ಬೆಳಗು ನಿಂದು ಇನ್ನೊಂದರ ಸುಖವನರಿಯದು. ಗುರುನಿರಂಜನ ಚನ್ನಬಸವಲಿಂಗದ ಬೆಳಗು ತನ್ನ ಸರ್ವಾಂಗದಲ್ಲಿ ನಿಂದು ತ್ರಿಪುಟಿಶೂನ್ಯನಾಗಿರ್ದ ಕಾಣಾ.