Index   ವಚನ - 665    Search  
 
ಆರಾರಂಗದ ಸಂಗಕ್ಕೆ ನಿಲುಕದ ನಿರಾಮಯ ಲಿಂಗವೆನ್ನ ಸಾರಾಯ ಗಮನಾಗಮನಕ್ಕೆಯ್ದಿದ ಪರಿಯ ನೋಡಾ! ಅಯ್ಯಾ, ಎನ್ನ ಪ್ರಾಣನಾಥನ ಕೂಡಿ ಮಾತನಾಡುವೆ, ಅಗಲಲಿಂಬಿಲ್ಲದೆ. ಅಯ್ಯಾ, ಎನ್ನ ಕೇಳಿಕೆಯಲ್ಲಿ ಕೂಡೆ ಕೇಳುವೆ ಬಿಡಲೆಡೆಯಿಲ್ಲದೆ. ಅಯ್ಯಾ, ಎನ್ನ ನೋಟದಲ್ಲಿ ಕೂಡೆ ನೋಡುವ ತಪ್ಪಲುಳುವಿಲ್ಲದೆ. ಅಯ್ಯಾ, ಎನ್ನ ಹಿಡಿತ ಬಿಡಿತಗಳಲ್ಲಿ ಕೂಡೆ ಮಾಡುವೆ ಬೇರೆಮಾಡಲನುವಿಲ್ಲದೆ. ಅಯ್ಯಾ, ಎನ್ನ ಸಕಲ ನಿಃಕಲ ಸದ್ಗಂಧವ ಕೂಡೆ ಸುಖಿಸುವೆ ಬೆಚ್ಚಲಿಂಬಿಲ್ಲದೆ, ಅಯ್ಯಾ, ಎನ್ನಂತರ್ಬಾಹ್ಯದವಿರಳಾನಂದವನು ಕೂಡೆ ಪರಿಣಾಮಿಸುವೆ ಬೇರ್ಪಡಿಸಲೆಡೆಯಿಲ್ಲದೆ, ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ.