Index   ವಚನ - 666    Search  
 
ಅಯ್ಯಾ, ಎನ್ನ ನಡೆಯಲ್ಲಿ ನಿನ್ನನುಳಿದು ನಡೆದೆನಾದರೆ ಹುಳುಗೊಂಡ ಮುಂದೆ ನಿರುತವೆಂಬುದು. ನಿಮ್ಮವರ ನಿನ್ನ ವಾಕ್ಯವನು ಕೇಳಿ ಅಂಜಿ ನಡೆವೆನಯ್ಯಾ. ಅಯ್ಯಾ, ಎನ್ನ ನುಡಿಯಲ್ಲಿ ನಿನ್ನನುಳಿದು ನುಡಿದೆನಾದರೆ ಕೊಂದುಕೆಡಹುವರು ಮುಂದೆ ನಿರವಯದಲ್ಲೆಂಬುದು ನಿಮ್ಮವರ ನಿನ್ನ ವಾಕ್ಯವ ಕೇಳಿ ಅಂಜಿ ನುಡಿವೆನಯ್ಯಾ. ಅಯ್ಯಾ, ಎನ್ನ ಕೂಟದಲ್ಲಿ ನಿನ್ನನುಳಿದು ಕೂಡಿದೆನಾದರೆ ಮುಂದೆ ನಾಯಕ ನರಕವೆಂಬುದು ನಿಮ್ಮವರ ನಿನ್ನ ವಾಕ್ಯವ ಕೇಳಿ ಅಂಜಿ ಕೂಡುವೆನಯ್ಯಾ. ಅಯ್ಯಾ, ಎನ್ನೊಳಹೊರಗೆ ನಾನರಿಯದೆ ನೀನೆಯಾಗಿರ್ದೆನು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.