Index   ವಚನ - 692    Search  
 
ಸಗುಣಾನಂದಸನ್ನಿಹಿತ ಶರಣಂಗೆ ಸಾಕಾರವೆಲ್ಲ ಚಿತ್ಸಾಕಾರವಾಗಿ ಶಿವಲೀಲಾನುಕೂಲಿಯಲ್ಲಿ ತೋರುತಲಿರ್ದವು. ನಿರ್ಗುಣಾನಂದಸನ್ನಿಹಿತ ಶರಣಂಗೆ ನಿರಾಕಾರವೆಲ್ಲ ಚಿನ್ನಿರಾಕಾರವಾಗಿ ಶಿವಾನುಕೂಲಿಯಲ್ಲಿ ತೋರುತಲಿರ್ದವು. ನಿರವಯಾನಂದಸನ್ನಿಹಿತ ಶರಣಂಗೆ ಶೂನ್ಯಾಕಾರವೆಲ್ಲ ನಿಃಶೂನ್ಯಾಕಾರವಾಗಿ ಶಿವಾನುಕೂಲಿಯಲ್ಲಿ ತೋರುತಲಿರ್ದವು. ಹೊರಗೊಳಗರಿಯದ ಪರಿಪೂರ್ಣನು ತಾ ಮಾಡಿದಡೆ ಕರ್ಮಕಾಂಡಿಯಲ್ಲ ಮಾಡದಿರ್ದಡೆ ಜ್ಞಾನಕಾಂಡಿಯಲ್ಲ ಉಭಯವನಳಿದು ಗುರುನಿರಂಜನ ಚನ್ನಬಸವಲಿಂಗ ತಾನಾಗಿರ್ದ ಶರಣ.