Index   ವಚನ - 704    Search  
 
ಮಾರ್ಗಕ್ರಿಯೆಗಳನೊಳಕೊಂಡು ಮೀರಿದಕ್ರಿಯೆಯಲ್ಲಿ ನಿಂದ ಪರಮಾನಂದ ಶರಣಂಗೆ ಲೋಕದ ನಡೆ ಲೋಕದ ನುಡಿ ಲೋಕದ ಪ್ರಪಂಚಗಳೆಂಬ ಖಂಡಿತಕರ್ಮಗಳೇನೂ ಇಲ್ಲ ನೋಡಾ. ಅಖಂಡ ಅನುಪಮಸುಖಿ ಈ ವರ್ಮವನರಿಯಲರಿಯದೆ ಕಂಡವರ ಕಂಡು ಒಂದು ಕುರುಹವಿಡಿದು ಮನಸಿಗೆ ಬಂದಂತೆ ವಾರ ತಿಥಿ ನಕ್ಷತ್ರ ಮಾಸ ವರುಷವಿಡಿದು ನೇಮವಿಟ್ಟು ಮಾಟ ನಿಯಮವಿಟ್ಟಾರ್ಚನೆ ನಿಯಮಾರ್ಪಣವೆಂದು ಕೆಟ್ಟ ಭಾವದಲ್ಲಾಡುವ ಸೊಟ್ಟಕರ್ಮಾಳಿಗಳ ಕಂಡು ಎನಗೆ ಚೋದ್ಯವಾಯಿತ್ತು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.