Index   ವಚನ - 730    Search  
 
ಕಲ್ಯಾಣವೆಂಬ ಪಟ್ಟಣದಲ್ಲಿ ಅಸಖ್ಯಾಂತ ಮಹಾಗಣಂಗಳಿಗಾಶ್ರಯಸ್ಥಾನವಾದ ತ್ರಿಪುರಾಂತಕೇಶ್ವರನ ಆಲಯ. ಅಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮಾರಾಧನೆ ನಿತ್ಯವಾಗಿ ಒಪ್ಪುತಿಪ್ಪುದು. ಬಸವಣ್ಣನ ಮನೆಯಲ್ಲಿ ಎರಡು ಲಕ್ಷ ನಾಲ್ಕುಸಾವಿರ ಪರಿಪೂರ್ಣಾರಾಧನೆ ನಿತ್ಯವಾಗಿಪ್ಪುದು. ಮಡಿವಾಳಯ್ಯನ ಆಲಯದಲ್ಲಿ ಮೂರು ಲಕ್ಷ ಒಂದು ಸಾವಿರ ಮಹಾರಾಧನೆ ನಿತ್ಯವಾಗಿಪ್ಪುದು. ಮರುಳುಶಂಕರದೇವರಾಲಯದಲ್ಲಿ ನಾಲ್ಕುಲಕ್ಷನೂರು ಆರಾಧನೆ ನಿತ್ಯವಾಗಿಪ್ಪುದು. ಸಿದ್ಧರಾಮದೇವರಾಲಯದಲ್ಲಿ ಐದುಲಕ್ಷನೂರಾರಾಧನೆ ನಿತ್ಯವಾಗಿಪ್ಪುದು. ಉರಿಲಿಂಗಪೆದ್ದಣ್ಣಗಳಾಲಯದಲ್ಲಿ ಆರುಲಕ್ಷನೂರಾರಾಧನೆ ನಿತ್ಯವಾಗಿಪ್ಪುದು. ಘಟ್ಟಿವಾಳಯ್ಯಗಳಾಲಯದಲ್ಲಿ ಇಂತೀ ಘನದಾಸೋಹದ ಮಹದಾನಂದದುಳುಮೆಯಾದ ಶೇಷಪ್ರಸಾದವನುಂಡು ಸುಖಿಸಿ ಪರಮಪರಿಣಾಮಿಯಾಗಿರ್ದೆನು ಗುರುನಿರಂಜನ ಚನ್ನಬಸವಲಿಂಗದಲ್ಲಿ.