Index   ವಚನ - 754    Search  
 
ಪರಿಪೂರ್ಣ ಪ್ರಕಾಶಲಿಂಗಸನ್ನಿಹಿತ ಮಹದಾನಂದ ಶರಣ, ಅವಿರಳ ಜ್ಞಾನಕ್ರಿಯೆಯಿಂದರಿದಾನಂದಿಸುವನಲ್ಲದೆ ಯೋಗಮಾರ್ಗವಿಡಿದು ಬಳಲಿ ಬಾಯಾರಿ ಬೆಂಡಾಗಿ ಬಿದ್ದು ಹೋಗುವನಲ್ಲ. ಅದೇನು ಕಾರಣವೆಂದೊಡೆ, ಮಾಣಿಕದ ಪರ್ವತದೊಳಗಿರ್ದು ಉಂಗುರಾಭರಣಕ್ಕೆಂದು ಗಾಜಿನಮಣಿಯಾಗಬೇಕೆಂದು ಪಾಷಾಣಗಿರಿಯ ಶೋಧಿಸಿ ಬಳಲುವ ನಾಶಜ್ಞಾನ ನರಮಾನವನಂತೆ, ತನ್ನ ಕರ ಮನ ಭಾವದಲ್ಲಿ ಪ್ರಜ್ವಲಿಸುವ ಮಹಾಪ್ರಕಾಶಮಯವಾದ ಇಷ್ಟಬ್ರಹ್ಮವನರಿಯದೆ ಬೇರೆ ಬೆಳಗಕಂಡು ಕೂಡಬೇಕೆಂದು ದೇಹಭಾವವೆಂಬ ಗಿರಿಯ ಹಿಡಿದು ಕಷ್ಟಬಡುವ ಸೊಟ್ಟ ಮತಿಯನೇನೆಂಬೆ? ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಇಂತುಟಲ್ಲ.