ಘನಮಹಿಮರನುಭಾವದ ಬೆಳಗೆನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ
ಅನಿಷ್ಟವ ನಷ್ಟಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಚಿನುಮಯ ಶರಣರನುಭಾವದ ಬೆಳಗೆನ್ನ ಮನಸ್ಥಲದಲ್ಲಿ ಪ್ರಾಣಲಿಂಗವಾಗಿ
ಪ್ರಾಣನ ಪ್ರಕೃತಿಯ ದಹಿಸಿ ಥಳಥಳನೆ ಬೆಳಗುತ್ತಿದೆ ನೋಡಾ.
ಸತ್ಪುರುಷರನುಭಾವದ ಬೆಳಗೆನ್ನ ಭಾವಸ್ಥಲದಲ್ಲಿ ಭಾವಲಿಂಗವಾಗಿ
ಸಂಸಾರ ವಿಷಯಭ್ರಾಂತಿಯನಳಿಸಿ ಥಳಥಳನೆ ಹೊಳೆಯುತ್ತಿದೆ ನೋಡಾ.
ನಿಜಪ್ರಕಾಶ ಶರಣರನುಭಾವದ ಬೆಳಗೆನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ
ಅನಾಚಾರವನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಸತ್ಯಶರಣರನುಭಾವದ ಬೆಳಗೆನ್ನ ಜಿಹ್ವೆಯ ಸ್ಥಲದಲ್ಲಿ ಗುರುಲಿಂಗವಾಗಿ
ಅನೃತವ ನಾಶಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಅನುಪಮ ಶರಣರನುಭಾವದ ಬೆಳಗೆನ್ನ ನಯನ ಸ್ಥಲದಲ್ಲಿ ಶಿವಲಿಂಗವಾಗಿ
ದುಶ್ಚಲನೆಯ ದಹಿಸಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಪರಿಪೂರ್ಣ ಶರಣರನುಭಾವದ ಬೆಳಗೆನ್ನ
ತ್ವಕ್ಕಿನ ಸ್ಥಲದಲ್ಲಿ ಜಂಗಮಲಿಂಗವಾಗಿ
ಭಿನ್ನಭಾವದ ಸೋಂಕನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಪರಮಾನಂದ ಶಣರನುಭಾವದ ಬೆಳಗೆನ್ನ ಶ್ರೋತ್ರಸ್ಥಲದಲ್ಲಿ
ಪ್ರಸಾದಲಿಂಗವಾಗಿ ದುಃಶಬ್ದರತಿಯ ನಷ್ಟವ ಮಾಡಿ
ಥಳಥಳನೆ ಹೊಳೆಯುತ್ತಿದೆ ನೋಡಾ.
ಪರಮಶಾಂತ ಶರಣರನುಭಾವದ ಬೆಳಗೆನ್ನ ಹೃದಯಸ್ಥಲದಲ್ಲಿ
ಮಹಾಲಿಂಗವಾಗಿ ಭಿನ್ನದರಿವನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ.
ನಿರುಪಮ ಶರಣರನುಭಾವದ ಬೆಳಗೆನ್ನ ಬ್ರಹ್ಮರಂಧ್ರದಲ್ಲಿ
ನಿಃಕಲಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ.
ನಿರ್ಮಾಯ ಶರಣರನುಭಾವದ ಬೆಳಗೆನ್ನ ಉನ್ಮನಿಯಲ್ಲಿ
ಶೂನ್ಯಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ.
ನಿರವಯ ಶರಣರನುಭಾವದ ಬೆಳಗೆನ್ನ ಪಶ್ಚಿಮದಲ್ಲಿ
ನಿರಂಜನಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ.
ಇದು ಕಾರಣ, ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಅಖಂಡ ಶರಣರನುಭಾವದ ಬೆಳಗೆನ್ನ ಕಿಂಚಿತ್ತು ಕಾಣಿಸದೆ
ಸರ್ವಾಂಗದಲ್ಲಿ ಥಳಥಳನೆ ಹೊಳೆಯುತ್ತಿದೆ ನೋಡಾ.
Art
Manuscript
Music
Courtesy:
Transliteration
Ghanamahimaranubhāvada beḷagenna karasthaladalli iṣṭaliṅgavāgi
aniṣṭava naṣṭamāḍi thaḷathaḷane hoḷeyuttide nōḍā.
Cinumaya śaraṇaranubhāvada beḷagenna manasthaladalli prāṇaliṅgavāgi
prāṇana prakr̥tiya dahisi thaḷathaḷane beḷaguttide nōḍā.
Satpuruṣaranubhāvada beḷagenna bhāvasthaladalli bhāvaliṅgavāgi
sansāra viṣayabhrāntiyanaḷisi thaḷathaḷane hoḷeyuttide nōḍā.
Nijaprakāśa śaraṇaranubhāvada beḷagenna ghrāṇadalli ācāraliṅgavāgi
anācāravanuruhi thaḷathaḷane hoḷeyuttide nōḍā.
Satyaśaraṇaranubhāvada beḷagenna jihveya sthaladalli guruliṅgavāgi
Anr̥tava nāśamāḍi thaḷathaḷane hoḷeyuttide nōḍā.
Anupama śaraṇaranubhāvada beḷagenna nayana sthaladalli śivaliṅgavāgi
duścalaneya dahisi thaḷathaḷane hoḷeyuttide nōḍā.
Paripūrṇa śaraṇaranubhāvada beḷagenna
tvakkina sthaladalli jaṅgamaliṅgavāgi
bhinnabhāvada sōṅkanuruhi thaḷathaḷane hoḷeyuttide nōḍā. Mahāliṅgavāgi bhinnadarivanuruhi thaḷathaḷane hoḷeyuttide nōḍā.
Nirupama śaraṇaranubhāvada beḷagenna brahmarandhradalli
niḥkalaliṅgavāgi thaḷathaḷane hoḷeyuttide nōḍā.
Nirmāya śaraṇaranubhāvada beḷagenna unmaniyalli
śūn'yaliṅgavāgi thaḷathaḷane hoḷeyuttide nōḍā.
Niravaya śaraṇaranubhāvada beḷagenna paścimadalli
niran̄janaliṅgavāgi thaḷathaḷane hoḷeyuttide nōḍā.
Idu kāraṇa, guruniran̄jana cannabasavaliṅgā
nim'ma akhaṇḍa śaraṇaranubhāvada beḷagenna kin̄cittu kāṇisade
sarvāṅgadalli thaḷathaḷane hoḷeyuttide nōḍā.
ಸ್ಥಲ -
ಶರಣನ ಪ್ರಾಣಲಿಂಗಿಸ್ಥಲ