Index   ವಚನ - 764    Search  
 
ಎನ್ನ ಸುಚಿತ್ತದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ ಶ್ರದ್ಧೆವೆರೆದಂಗನೆಯಾಗಿ ಸುಖಿಸಿದೆನಯ್ಯಾ. ಎನ್ನ ಸುಬುದ್ಧಿಯ ಕಳೆಯಲ್ಲಿ ಬೆಳಗುವಲಿಂಗಕ್ಕೆ ನೈಷ್ಠೆವೆರೆದಂಗನೆಯಾಗಿ ಬಾಳಿದೆನಯ್ಯಾ. ಎನ್ನ ನಿರಹಂಕಾರದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ ಸಾವಧಾನವೆರೆದಂಗನೆಯಾಗಿ ಸುಖಬಟ್ಟೆನಯ್ಯಾ. ಎನ್ನ ಸುಮನದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ ಅನುಭಾವವೆರೆದಂಗನೆಯಾಗಿ ಶಾಂತಳಾದೆನಯ್ಯಾ. ಎನ್ನ ಸುಜ್ಞಾನದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ ಆನಂದವೆರೆದಂಗನೆಯಾಗಿ ಪರಿಣಾಮಿಯಾದೆನಯ್ಯಾ. ಎನ್ನ ಸದ್ಭಾವದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ ಸಮರಸವೆರೆದಂಗನೆಯಾಗಿ ಪರಿಪೂರ್ಣಪರಿಣಾಮಿಯಾದೆನಯ್ಯಾ. ಎನ್ನ ಒಳಹೊರಗಿನ ಕಳೆಯಲ್ಲಿ ಬೆಳಗುವ ಗುರುನಿರಂಜನ ಚನ್ನಬಸವಲಿಂಗಕ್ಕೆ ನಿಜಾಂಗನೆಯಾಗಿ ಅನುಪಮ ಸುಖ ಸುಗ್ಗಿಯೊಳೋಲಾಡುತಿರ್ದೆನಯ್ಯಾ.