Index   ವಚನ - 1010    Search  
 
ಪರಧನಕ್ಕೆ ಇಚ್ಫೈಸುವನ್ನಕ್ಕರ, ಪರಸ್ತ್ರೀಗೆ ಮೋಹಿಸುವನ್ನಕ್ಕರ, ಪರದೈವವ ಭಜಿಸುವನ್ನಕ್ಕರ, ಪರಪಾಕವ ಕೊಂಬನ್ನಕ್ಕರ, ಪರಹಿಂಸೆಗೆಡದನ್ನಕ್ಕರ ಮಹೇಶ್ವರನೆನಲಾಗದು. ಹುಸಿ ನಾಶವಾಗದನ್ನಕ್ಕರ, ಕಳವು ಕುಚೇಷ್ಟೆಯ ನೀಗದನ್ನಕ್ಕರ, ಉಪಾಧಿಯನುಸರಣೆಯ ದಾಟದನ್ನಕ್ಕರ ಮಹೇಶ್ವರನೆನಲಾಗದು. ಭವಿಯಸಂಪರ್ಕ ಬಿಡದನ್ನಕ್ಕರ, ವೇಷಗಳ್ಳರ ಜರಿದು ನೂಕದನ್ನಕ್ಕರ, ಲೋಕಲೌಕಿಕಚರಿಯ ಹರಿಯದನ್ನಕ್ಕರ, ಸ್ವತಂತ್ರತ್ವಾನುಭಾವಿಯಾಗದನ್ನಕ್ಕರ ಮಹೇಶ್ವರನೆನಲಾಗದು. ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವೆಂದು ನಷ್ಟಬದ್ಧರಿಗೆರಗುವ ಭ್ರಷ್ಟಭವಿಗಳಿಗೊಮ್ಮೆ ಮಹೇಶ್ವರನೆಂದರೆ ಅಘೋರನರಕ ತಪ್ಪದು.