Index   ವಚನ - 1009    Search  
 
ಭಕ್ತನಾಚಾರ ಜಂಗಮಲಿಂಗಸನ್ನಿಹಿತ, ಜಂಗಮದಾಚಾರ ಲಿಂಗಜಂಗಮಸನ್ನಿಹಿತ, ಷಟ್ಕೃಷಿ ಸತ್ಕಾಯಕವೇ ಮುಕ್ತಿಯ ಬೀಡು, ಭಕ್ತಂಗಾದರು ಸತ್ಕಾಯಕವೇಬೇಕು, ಜಂಗಮಕ್ಕಾದರೂ ಸತ್ಕಾಯಕವೇಬೇಕು. ಭಕ್ತಂಗಾಚರಣೆ, ಜಂಗಮಕ್ಕೆ ಸಂಬಂಧ. ಅದೆಂತೆಂದೊಡೆ, ಜ್ಞಾನೋದಯವಾದ ಮಹಾತ್ಮನು ಮಾಯಾನಿವೃತ್ತಿಯ ಮಾಡಿ ತನುಸಂಬಂಧ ಸದ್ಗುರು ಸಮ್ಮುಖೋಪಾವಸ್ತೆಯನೆಯಿದು ಕಂಡು, ತನುತ್ರಯವನಿತ್ತು ದೀಕ್ಷಾತ್ರಯಾನ್ವಿತನಾಗಿ ಬಂದು ಸರ್ವಾಚಾರಸಂಪತ್ತು ಶೋಭನಲೀಲೆಯ ನಟಿಸುವಲ್ಲಿ ಸ್ಥಲಸ್ಥಲಂಗಳ ತಾಮಸಸುಳುಹಿಂಗೆ ಸುಜ್ಞಾನಶಾಸ್ತ್ರವನು ಸುಚಿತ್ತದಲ್ಲಿ ಧರಿಸಿ ಸಾಕಾರ ಸುದ್ರವ್ಯಂಗಳನು ನಿರ್ವಂಚಕತ್ವ ತ್ರಿಕರಣ ಶುದ್ಧಾತ್ಮಕದಿಂದೆ ಸಗುಣಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ ಶ್ರದ್ಧಾಭಕ್ತನಾಚಾರವಯ್ಯಾ. ಆ ತದ್ಭಾವಸಮೇತ ನಿಜಲಿಂಗಜಂಗಮಸನ್ನಿಹಿತ ಭೋಗೋಪಭೋಗಿಯಾಗಿಹುದೇ ಆಚಾರಲಿಂಗ ಜಂಗಮದ ಸ್ಥಲ. ಇದು ಅಸಿಯೆಂಬ ವ್ಯಾಪಾರವಯ್ಯ. ಆಚಾರಂಗ, ವಿಚಾರ ಮನ, ಸಮಯಾಚಾರ ಭಾವವೆಂಬ ನಿರ್ಮಲಸುಕ್ಷೇತ್ರಂಕನಾಗಿ ಸಾವಧಾನಮುಖಸುಖಭಕ್ತಿಯಿಂದೆ ಸಾಕಾರಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ ಸಾವಧಾನ ಪ್ರಸಾದಿಭಕ್ತನಾಚಾರವಯ್ಯಾ. ತದ್ಭಾವಭರಿತನಾಗಿ ಸ್ವಯಂ ಲಿಂಗಜಂಗಮಸನ್ನಿಹಿತನಾಗಿಹುದೇ ಶಿವಲಿಂಗಜಂಗಮಸ್ಥಲ. ಇದು ಕೃಷಿಯೆಂಬ ವ್ಯಾಪಾರವಯ್ಯಾ. ಮತ್ತೆ ಸ್ಥಲಸ್ಥಲಂಗಳಲ್ಲಿ ಭೇದಾಭೇದ ಸದ್ವಿವೇಕಮುಖ ಲೇಖನ ಸ್ಥಾಪ್ಯ ನಿರ್ಮಲನಿಷ್ಟಾಂಗನಾಗಿ ವೀರಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ ನಿಷ್ಠಾಮಹೇಶ್ವರ ಭಕ್ತನಸ್ಥಲ. ಅಂತಪ್ಪ ನಿಷ್ಠಾಂಗಮಂತ್ರಮೂರ್ತಿಯಾಗಿ ನಿಜಲಿಂಗಜಂಗಮಭೋಗೋಪಭೋಗಿಯಾಗಿಹುದೇ ಗುರುಲಿಂಗಜಂಗಮಸ್ಥಲ. ಇದು ಮಸಿಯೆಂಬ ವ್ಯಾಪಾರವಯ್ಯಾ. ಮತ್ತೆ ಸ್ಥಲಸ್ಥಲಂಗಳಲ್ಲಿ ದಶವಾಯುವಿನ ದಂದುಗವನು ಸುಜ್ಞಾನಕ್ರಿಯಾಸಂಭಾಷಣೆಯಲ್ಲಡಗಿಸಿ ಅಷ್ಟ ಕುಶಬ್ದ ಬಾಹ್ಯಪ್ರಣವ ಪರಿಪೂರ್ಣನಾಗಿ ಅನುಭಾವಭಕ್ತಿಯಿಂದೆ, ಸತ್ಯಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ ಪ್ರಾಣಲಿಂಗಿಭಕ್ತನಸ್ಥಲ. ತದ್ಭಾವ ಪರಿಪೂರ್ಣನಾಗಿ ಅನುಭಾವ ಲಿಂಗಜಂಗಮ ಭೋಗೋಪಭೋಗಿಯಾಗಿಹುದೇ ಚರಲಿಂಗ ಜಂಗಮಸ್ಥಲ. ಇದು ವಾಣಿಜ್ಯತ್ವವೆಂಬ ವ್ಯಾಪಾರವಯ್ಯಾ. ಮತ್ತೆ ಸ್ಥಲಸ್ಥಲಂಗಳಲ್ಲಿ ಅವಿರಳತ್ವದಿಂದೆ ಏಕೋತ್ತರಶತ ಸಕೀಲ ಸರ್ವಕಲಾಭಿಜ್ಞತೆಯಾತ್ಮಕನಾಗಿ, ಚಿದೇಂದ್ರಿ ಚಿತ್ಕರಣ ಚಿದ್ವಿಷಯಾನಂದಪ್ರಸಾದಕ್ಕೆ ಸುಜ್ಞಾನದಿಂ ಕಾಮ್ಯಾಂಗನಾಗಿ ಜಂಗಮಲಿಂಗ ಭೋಗೋಪಭೋಗಿಯಾಗಿಹುದೇ ಶರಣ ಭಕ್ತನಾಚಾರವಯ್ಯ. ತದ್ಭಾವಾತ್ಮಕನಾಗಿ ಆ ವೀರ ಲಿಂಗಜಂಗಮ ಭೋಗೋಪಭೋಗಿಯಾಗಿಹುದೇ ಪ್ರಸಾದಲಿಂಗ ಜಂಗಮಸ್ಥಲ. ಇದು ಯಾಚಕತ್ವವೆಂಬ ವ್ಯಾಪಾರವಯ್ಯಾ. ಸ್ಥಲಸ್ಥಲಂಗಳಲ್ಲಿ ಅಹಂಭಾವವಳಿದು ಸೋಹಂಭಾವವನುಳಿದು, ದಾಸೋಹಂಭಾವಭರಿತನಾಗಿ ತನುಮನಧನದ ಮಾಟ ನೋಟ ಕೂಟ ಶೂನ್ಯನಾಗಿ ಘನಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ ಐಕ್ಯಸ್ಥಲದಾಚಾರವಯ್ಯಾ. ತದ್ಭಾವಪೂರ್ಣನಾಗಿ ಸರ್ವಶೂನ್ಯತ್ವದಿಂದೆ ನಿರಾಮಯಲಿಂಗಜಂಗಮ ಭೋಗೋಪಭೋಗಿಯಾಗಿಹುದೇ ಮಹಾಲಿಂಗಜಂಗಮಸ್ಥಲ. ಇದು ಗೋಪಾಲತ್ವವೆಂಬ ವ್ಯಾಪಾರವಯ್ಯಾ. ಈ ಭೇದವನರಿಯದೆ ಭಕ್ತನೆನಿಸಿ ವರ್ತಿಸುವ ಪ್ರಾಣಿ ಅನಾಚಾರಿ. ಈ ಭೇದವನರಿಯದೆ ಕಾಯ ಕಂದಿಸಿ ಮನವ ಸಂಸಾರಕ್ಕಿಕ್ಕಿ ಭಾವ ಭ್ರಾಂತಿಗೊಂಡು ಮಾಟಕೂಟವ ಹೊತ್ತು ತಿರುಗುವ ಪ್ರಾಣಿ ಅಜ್ಞಾನಿ. ಈ ಉಭಯವನರಿಯದೆ ಸಂಬಂಧವನು ಅಸಂಬಂಧವ ಮಾಡಿ, ಅಸಂಬಂಧವನು ಸಂಬಂಧವ ಮಾಡಿಕೊಟ್ಟು ಹಿರಿಯನೆನಿಸುವವ ಮೂಢಪ್ರಾಣಿ. ಇದು ಕಾರಣ ಈ ಅನಾಚಾರಿ ಅಜ್ಞಾನಿ ಮೂಢ ಪ್ರಾಣಿಗಳ ನೋಡಿ ನಗುತಿರ್ದರು ಕಾಣಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರು.