ತನ್ನ ತಾನರಿಯದೆ ತಾನಾರೆಂದು ತಿಳಿಯದೆ
ಉಪಾಧಿ ಬೋಧಕ್ಕೆ ಸಿಲ್ಕಿ
ಶ್ವಾನ ಮಾಂಸ ಕಚ್ಚಿಕೊಂಡ ಪರಿಯಲ್ಲಿರಲು,
ಆ ಸಮಯದಲ್ಲಿ ಇತ್ತರವಾಗಿರ್ದ ಮನುಜ ಬರಲು
ಕಂಡು ಅಂಜಿ ಭೀತಿಸಿ,
ನನ್ನ ಕಲ್ಪನೆ ಅರಿಯಿತೆಂದು ಆಹಾರಮಂ ತೆಗೆದನೆಂದು
ಗುರುಗುಟ್ಟುವ ಶ್ವಾನನ ಮರ್ಯಾದೆಯಲ್ಲಿ
ಕಲ್ಪಿತಾಹಾರಮಂ ಕಂಡು ನಚ್ಚಿ ಮಚ್ಚಿ
ಅಜ್ಞಾನದೊಳು ಬಿದ್ದು ಸಾವ ಭ್ರಾಂತಮೂಳರಿಗೆ
ದೊರಕುವುದೆ ಸ್ವಯಂಭು?
ಇತರವನಳಿದಂಗಲ್ಲದೆ ನರರಿಗುಂಟೆ ಹೇಳಾ?
ಘನ ಮಹತೋತ್ತಮನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.