Index   ವಚನ - 10    Search  
 
ನಕಾರ ಮಕಾರ ಶಿಕಾರ ವಕಾರ ಯಕಾರ ಈ ಪಂಚಾಕ್ಷರಿ ಪ್ರಣಮವನರಿದು, ಅಂಗದ ಮೇಲೆ ಶಿವಲಿಂಗ ಧಾರಣವಾಗಿ, ಸದ್ಯೋಜಾತಮುಖದ ಆಚಾರಲಿಂಗದೇವರು ವಾಮದೇವಮುಖದ ಗುರುಲಿಂಗದೇವರು ಅಘೋರಮುಖದ ಶಿವಲಿಂಗದೇವರು ತತ್ಪುರುಷಮುಖದ ಚರಲಿಂಗದೇವರು ಈಶಾನಮುಖದ ಪ್ರಸಾದಲಿಂಗದೇವರು ಗಂಭೀರಮುಖದ ಘನಲಿಂಗದೇವರುಗಳಿಂದ ಕರ್ಮವಳಿದು ದೃಢವಾಗಿ ಮುಕ್ತರಾದೆವೆಂದು ಹೆಸರಿಟ್ಟುಕೊಂಡು ಪಂಚಾಕ್ಷರಿ ಪಂಚಬ್ರಹ್ಮವನರಿದು ಓಂಕಾರ ಸಾಕ್ಷಾತ್ ಶಿವಬ್ರಹ್ಮವನರಿಯಲ್ಕೆ ಭವವಳಿದು ಬಯಲಾದೆವು ಎಂಬರು. ಮುಂದೆ ಭವವುಳ್ಳ ದೇಹ ಭವವಳಿವುದು ಹೇಂಗಯ್ಯಾ? ಭವವಿಲ್ಲದಾತನು ಮುಟ್ಟಲು ಭವವುಳ್ಳ ದೇಹವಳಿದು ಭ್ರಮೆಯ ಮೀರಿ ಅಚ್ಚಳಿದು ನಿಂದ ನಿಜಕ್ಕೆ ಮೆಚ್ಚುವುದು ಇನ್ನೊಂದುಂಟೆ ಹೇಳಾ? ಮನವೆ ಮುಖ್ಯವ ಮಾಡುವ ಭ್ರಮಿತರಿಗೆ ಮನ ಮುಳುಗಿದಂತೆ ಮುಳುಗುವರು ಕಾಣಾ. ಮುಳುಗಿದವರು ಮುಳುಗಿಸುವರ ಎಬ್ಬಿಸುವರ ಏನು ಬಲ್ಲರು ಹೇಳಾ? ಮುಕ್ತನೆ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.