Index   ವಚನ - 11    Search  
 
ಸಹಜವುಳ್ಳ ಭಕ್ತರಿಗೆ ಕಾಮುಕರಾಗಿ ಕೆಡಬೇಡೆಂದು ಅಜ್ಞಾನಕ್ಕೆ ಗುರಿಯಾದಿರಿ. ಮುಂದೆ ಜ್ಞಾನವೆಂಬುದೆಲ್ಲವಾಗಿ ಗುರುಪಾದವ ಹಿಡಿದು ಜ್ಞಾನಮುಕ್ತನಾಗಿ ಮೋಕ್ಷಾರ್ಥವ ಹಾರೈಸಿಕೊಂಡು ತನುವ ಗುರುವಿಗೆ ಅರ್ಪಿಸಬೇಕು, ಮನವ ಲಿಂಗಕ್ಕೆ ಅರ್ಪಿಸಬೇಕು, ಧನವ ಜಂಗಮಕ್ಕೆ ಅರ್ಪಿಸಬೇಕು. ತಮ್ಮ ಭಾವದಿಂದ ಬೋಧಿಸಿ ನುಡಿಯಲ್ಕೆ ಶಿಷ್ಯ ಸುಬುದ್ಧಿಯಿಂದ 'ಗುರುವೇ ನೀನು ಅಧಿಕಾರನು ನಿನ್ನ ಪಾದ ಸೋಂಕಿತೆಂದು' ನುಡಿಯಲಾಗಿ, ಆ ಶಿಷ್ಯಂಗೆ ಮನಮುಖ್ಯವಾದ ಬೋಧೆಯ ಬೋಧಿಸಿ ಆತಂಗೆ ಕಟ್ಟಳೆಯ ಮಾಡಿ ಹೆಣ್ಣು ಹೊನ್ನು ಮಣ್ಣು ಮೂರು ಗುರುವಿಗೆ ಅರ್ಪಿತ ಮಾಡಬೇಕೆಂದು ನುಡಿಯಲಾಗಿ, ಅವನು ವಿಕಾರಿಯಾಗಿ 'ಸ್ವಾಮಿ, ಹೆಣ್ಣು ಹೊನ್ನು ಮಣ್ಣು ಸರ್ವವೂ ನಿಮಗೆ ಸಮರ್ಪಣವೆಂದು' ನುಡಿಯಲಾಗಿ, ಬೋಧಿಸುವ ಆ ಗುರುವಿಂಗೆ ಒಂದು ವಿಕಾರ ಹೋಗಿ ಐದು ವಿಕಾರಗಳಾಗಿ ಪಂಚಭೂತ ಮದಂಗಳೇರಿ ತನುವಿಕಾರಿಯಾಗಿ ಮನವಿಕಾರಿಯಾಗಿ ಆಚಾರ ವಿಚಾರ ಬಿಟ್ಟು ಅನಾಚಾರಿಯಾಗಿ ಕಚ್ಚಡಕನಾಗಿ ಕೊಳ್ಳದ ಆಹಾರಂಗಳ ಕೊಂಡು ಕೆಟ್ಟ ವೇಷಡಂಭಕರ ತೋರದಿರಯ್ಯಾ. ಇಂಥ ತೊಟ್ಟೆ ಕುಡಿಯುವ ಮೆಚ್ಚು ಮಾರಿಗೆ ಎತ್ತಣ ಸ್ವಯಂಭು ಎತ್ತಣ ನಿಜವು. ತೊತ್ತು ದೊರೆಯಾಗುವುದೇನಯ್ಯಾ? ನಿತ್ಯವನರಿಯದ ಮೃತ್ಯುಮಾರಿಗಳಿಗೆ ಎತ್ತಣ ಬ್ರಹ್ಮವು? ಬ್ರಹ್ಮವೆತ್ತ, ತಾನೆತ್ತ, ಹೋಗತ್ತ. ಇಂಥ ಭ್ರಾಂತುಯೋಗಿಗಳು ಕೆಟ್ಟ ಕೇಡಿಂಗೆ ಕಡೆಯಿಲ್ಲ. ವಿದೇಹಿ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.