Index   ವಚನ - 2    Search  
 
ಅಯ್ಯಾ, ಆಸೆಯ ಪಾಶದಿಂದ ತೊಳಲಿತಯ್ಯ ಎನ್ನ ಕಾಯವು. ಆಸೆ-ಆಮಿಷದಿಂದ ಹೊದಕುಳಿಗೊಂಡಿತಯ್ಯ ಎನ್ನ ಮನವು. ಆಸೆಯೆಂಬ ಮರವೆಯಲ್ಲಿ ಮನೆಮಾಡಿತಯ್ಯ ಎನ್ನ ಪ್ರಾಣವು. ಆಸೆಯೆಂಬ ಹೊಡೆಗಿಚ್ಚಿನಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಭಾವವು. ಇನ್ನೆನಗೆ ಗತಿಯ ಪಥವ ತೋರಿಸಿ ರಕ್ಷಿಸಯ್ಯ, ಭವಪಾಶರಹಿತ ಪರಬ್ರಹ್ಮಮೂರ್ತಿ ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.