ಅಯ್ಯಾ, ಎನ್ನೊಳಗೆ ನೀವು ಹುಡುಕಿದಡೆ
ಎಳ್ಳಿನಿತು ಸುಗುಣವಿಲ್ಲವಯ್ಯ.
ಎನ್ನೊಳಗೆ ನೀವು ವಿಚಾರಿಸಿದಡೆ
ಸಪ್ತಸಮುದ್ರ ಸಪ್ತದ್ವೀಪದಷ್ಟು ಅಪರಾಧವುಂಟಯ್ಯ.
ತಂದೆ, ಎನ್ನ ಅಪರಾಧವ ನೋಡದೆ
ನಿಮ್ಮ ಕರುಣದೃಕ್ಕಿನಿಂದ ಸಲಹಯ್ಯ.
ಪರಮಾರಾಧ್ಯ ಪರಾತ್ಪರಮೂರ್ತಿ ಶ್ರೀ ಗುರುಲಿಂಗಜಂಗಮವೆ,
ನೀವು ಈರೇಳುಲೋಕಕ್ಕೆ ಅಪರಾಧಕ್ಷಮಿತರೆಂಬ
ಬಿರುದುಂಟು ನೋಡಾ.
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ!