Index   ವಚನ - 8    Search  
 
ಅಯ್ಯಾ, ಚಂದಚಂದವುಳ್ಳ ವೃಷಭ, ಚಂದಚಂದವುಳ್ಳ ವಾಜಿ, ಚಂದಚಂದವುಳ್ಳ ಆನೆ, ಚಂದಚಂದವುಳ್ಳ ಅಂದಳ, ಚಂದಚಂದವುಳ್ಳ ಪರಿಯಂಕ, ಚಂದಚಂದವುಳ್ಳ ಮೇಲುಪ್ಪರಿಗೆ, ಚಂದಚಂದವುಳ್ಳ ಜಾಡಿ-ಜಮಕಾನ-ಚಿತ್ರಾಸನ, ಚಂದಚಂದವುಳ್ಳ ಮಣಿಪೀಠ, ಚಂದಚಂದವುಳ್ಳ ಲೇಪು ಸುಪ್ಪತ್ತಿಗೆ, ಚಂದಚಂದವುಳ್ಳ ಪಟ್ಟುಪಟ್ಟಾವಳಿ ಹಾಸಿಗೆಯ ಮೇಲೆ ನಿಮ್ಮ ಶರಣಗಣಂಗಳ ಸಮೂಹವ ಮೂರ್ತವ ಮಾಡಿಸಿ, ಭೃತ್ಯಭಕ್ತಿಯ ಮಾಡದೆ ಮೂಲಹಂಕಾರದಿಂದ ತಾನೆ ಕುಂತು ನಿಂತು ಮಲಗಿ ನಿಜಗೆಟ್ಟಿತಯ್ಯ ಎನ್ನ ಪಾಯ್ವೇಂದ್ರಿಯವು. ಇಂಥ ಅಜ್ಞಾನದಿಂದ ಕೆಡಗುಡದೆ ನಿಮ್ಮ ಸದ್ಭಕ್ತ ಸದಾಚಾರಿ ಶಿವಶರಣ ಮೇದಾರಕೇತಯ್ಯಗಳ ಮನೆಯ ತೊತ್ತಿನ ರಕ್ಷೆಯ ಕಾಯ್ವಂತೆ ಮಾಡಯ್ಯ ಶ್ರೀಗುರುಲಿಂಗಜಂಗಮವೆ! ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.