Index   ವಚನ - 9    Search  
 
ಅಯ್ಯಾ, ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ ಕಶ್ಯಪ ಭಾರದ್ವಾಜ ಮೊದಲಾದ ನೂರೊಂದು ಕುಲ, ಹದಿನೆಂಟು ಜಾತಿಯವರೊಳಗಾಗಿ ಯೌವನದ ಸ್ತ್ರೀಯರ ಕಂಡು, ಸಂಪಿಗೆ ಪುಷ್ಪಕ್ಕೆ ಭ್ರಮರನಿಚ್ಫೈಸುವಂತೆ ಕಾಮವಿಕಾರದಿಂದ, ಮೊಲಕ್ಕೆ ನಾಯಿ ಹಂಬಲಿಸಿದಂತೆ, ಮಾಂಸಕ್ಕೆ ಹದ್ದು ಎರಗಿದಂತೆ, ಸತ್ತ ದನವ ನರಿ ಕಾಯ್ದುಕೊಂಡಂತೆ, ಹೆಣ್ಣು ನಾಯಿ ಗಂಡು ನಾಯಿ ಕೂಟವ ಕೂಡಿ ಪಿಟ್ಟಿಸಿಕ್ಕಿ ಒರಲುವಂತೆ, ಮನ್ಮಥರತಿಸಂಗದಿಂದ, ಜನನದ ತಾಯಿಯೆನ್ನದೆ, ಅತ್ತಿಗೆ ನಾದಿನಿಯೆನ್ನದೆ, ಅಕ್ಕತಂಗಿಯೆನ್ನದೆ, ನಡತೆಯ ಒಡಹುಟ್ಟಿದವರೆನ್ನದೆ, ಅತ್ತೆ ಸೊಸೆಯೆನ್ನದೆ, ಮಗಳು ಮೊಮ್ಮಗಳೆನ್ನದೆ, ಅಜ್ಜಿ ಆಯಿಯೆನ್ನದೆ ಪಿಶಾಚರೂಪತಾಳಿ ಉಚ್ಚೆಯ ಬಚ್ಚಲಿಗೆ ಹೊಡದಾಡಿ ಸತ್ತಿತಯ್ಯ ಎನ್ನ ಗುಹ್ಯೇಂದ್ರಿಯವು. ಇಂತೀ ಗುಹ್ಯಲಂಪಟಕ್ಕೆ ದೂರವಾದ ಮಹಾಘನ ಸದ್ಭಕ್ತ ಶಿವಶರಣ ಶಂಕರದಾಸಿಮಯ್ಯನ ದಾಸಿಯ ದಾಸನ ಮಾಡಿ ಸಲಹಯ್ಯ. ಕಾರುಣ್ಯಸಾಗರ, ಪರಮಾನಂದಮೂರ್ತಿ, ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.