Index   ವಚನ - 16    Search  
 
ಅಯ್ಯಾ, ಕುಶಬ್ದ, ಹಿಂಸೆಶಬ್ದ, ಹೊಲೆಶಬ್ದ, ಭಾಂಡಿಕಾಶಬ್ದ, ವಾಕರಿಕೆ ಶಬ್ದ, ಗುರುಚರಪರಭಕ್ತಗಣನಿಂದ್ಯದ ನುಡಿ, ಕುಟಿಲ ಕುಹಕ ಶಬ್ದ, ಭಂಡ ಅಪಭ್ರಷ್ಟರ ನುಡಿ, ಸೂಳೆ ದಾಸ ಷಂಡರ ನುಡಿ, ಹೊನ್ನು-ಹೆಣ್ಣು-ಮಣ್ಣು-ಐಶ್ವರ್ಯಕ್ಕೆ ಹೊಡದಾಡಿ ಸತ್ತವರ ಕಥಾಪ್ರಸಂಗದ ಶಬ್ದ, ವೇಶ್ಯಾಂಗನೆಯರ ರಾಗ ಮೊದಲಾಗಿ ಭವದ ಕುಶಬ್ದಕ್ಕೆ ಎಳೆ ಮೃಗದೋಪಾದಿಯಲ್ಲಿ ಮೋಹಿಸಿ, ಭ್ರಷ್ಟತನದಿಂದ ತೊಳಲಿತಯ್ಯ ಎನ್ನ ಶ್ರೋತ್ರೇಂದ್ರಿಯವು. ಇಂಥ ಕುಶಬ್ದರ ಸಂಗದಿಂದ ನಿಮ್ಮ ಶರಣರ ಮಹತ್ವದ ಮಹಾಘನ ಶಬ್ದವ ಮರದೆನಯ್ಯ. ಮಂತ್ರಮೂರ್ತಿ ಸರ್ವ ಸೂತ್ರಾಧಾರ ಪರಬ್ರಹ್ಮವೆ ಎನ್ನಪರಾಧವ ನೋಡದೆ, ನಿಮ್ಮ ಸದ್ಭಕ್ತ ಶರಣಗಣಂಗಳ ವಚನಾಮೃತವ ಕೇಳಿ ಬೆರಗು ನಿಬ್ಬೆರಗಾಗುವಂತೆ ಮಾಡಯ್ಯ ಕರುಣಾಂಬುಧಿ ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.