Index   ವಚನ - 15    Search  
 
ಅಯ್ಯಾ, ಅನಂತ ನೂತನ ಗಣಂಗಳು-ಪೂರ್ವ ಪುರಾತನರು- ನೂರೊಂದು ವಿರಕ್ತರು-ಪ್ರಮಥಗಣಾಧೀಶ್ವರರ ಮಂದಿರಗಳಲ್ಲಿರುವಂತಹ ಪರಿಯಂಕ, ಹಾಸಿಕೆ, ಶಾಲು, ಸಕಲಾತಿ, ಹೂವಿನ ಹಚ್ಚಡ, ಶ್ವೇತಜರತಾರದ ಶಲ್ಯ, ಪಟ್ಟು ಪಟ್ಟೇದ ಧೋತ್ರ, ಸಣ್ಣಂಗಿ, ಬುಟ್ಟೇದ ದಗಲೆ, ನಗದೀ ವಸ್ತ್ರ, ಬೆಳ್ಳಿಯಾಭರಣ, ಚಿನ್ನದಾಭರಣ, ನವರತ್ನದಾಭರಣ, ಹವಳಮೌಕ್ತಿಕ ಮೊದಲಾದಾಭರಣಂಗಳ ಅವರ ಮನ ನೋಯುವಂತೆ ಅಪಹರತ್ವದಿಂದ ಚೋರರ ಕೂಡಿ ತೆಗೆದುಕೊಂಡು ಬಂದು, ಅನಂತ ಸ್ತ್ರೀಯರೊಡಗೂಡಿ ಹೊದ್ದು, ಹಾಸಿ, ಇಟ್ಟು, ತೊಟ್ಟು, ಭೋಗಿಸಿ, ಗಣದ್ರೋಹಕ್ಕೊಳಗಾಗಿ ಭವಪಾಶಕ್ಕೊಳಗಾಯಿತಯ್ಯ ಎನ್ನ ತ್ವಗೇದ್ರಿಯವು. ಇಂಥ ಪರಮದ್ರೋಹಿಯ ಸಂಗದಿಂದ ಕೆಟ್ಟೆನುಳುಹಿಕೊಳ್ಳಯ್ಯ. ಹೇ ಶಾಂಭವಮೂರ್ತಿಯೆ! ನಿಮ್ಮಂತಃಕರಣದಿಂದ ಅಭಯಹಸ್ತವಿತ್ತು ಪಾವನವ ಮಾಡಿ, ನಿಮ್ಮ ಸದ್ಭಕ್ತೆ ಶಿವಶರಣೆ ನಿರ್ವಾಣಪದನಾಯಕೆ ಅಕ್ಕಮಹಾದೇವಿಯರ ತೊತ್ತಿನ ತೊತ್ತು ಭೃತ್ಯಳು ಉಟ್ಟು ಬಿಟ್ಟ ನಿರ್ಮಾಲ್ಯದಿಂದ ಎನ್ನ ಪಾವನವ ಮಾಡಯ್ಯ ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.