Index   ವಚನ - 18    Search  
 
ಅಯ್ಯಾ, ಎನ್ನ ಹೊರಗೆ ನೋಡಿದಡೆ ಇಂತಾಯಿತಯ್ಯ. ಎನ್ನ ಒಳಗೆ ನೋಡಿದಡೆ ಎಳ್ಳಿನಿತು ಹುರುಳಿಲ್ಲವಯ್ಯ ದೇವ. ಹೊನ್ನು ನನ್ನದು, ಹೆಣ್ಣು ನನ್ನದು, ಮಣ್ಣು ನನ್ನದು, ಪುತ್ರಮಿತ್ರಕಳತ್ರಯಾದಿಗಳು ನನ್ನದು, ಧನಧಾನ್ಯ ನನ್ನದು, ಆನೆ ಕುದುರೆ ಎತ್ತು ತೊತ್ತು ಮಂದಿ ಮಕ್ಕಳು ಅಷ್ಟೈಶ್ವರ್ಯದಲ್ಲಿ ನಾ ಬಲ್ಲಿದನೆಂದು ಬಹುಹಮ್ಮಿನಿಂದ ಗುರುಹಿರಿಯರ ಕಂಡಡೆ ತಲೆವಾಗದಯ್ಯ ಎನ್ನ ಚಿತ್ತವು. ಇಂತಾ ಚಿತ್ತದಿಂದ ನುಗ್ಗುನುರಿಯಾದೆನಯ್ಯ ನಿಃಕಳಂಕಮೂರ್ತಿ ಸಚ್ಚಿದಾನಂದ ಎನ್ನ ಅಪರಾಧವ ನೋಡದೆ ಕಾಯಯ್ಯ. ಕರುಣಾಂಬುದಿ ಅನಾದಿ ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ! ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.