Index   ವಚನ - 19    Search  
 
ಅಯ್ಯಾ, ನಾನು ಬಹು ಸುಂದರನು, ನಾನು ಬಹು ಪರಾಕ್ರಮಿಯು, ನಾನು ಬಹು ಭೋಗಿಯು, ನಾನು ಬಹು ಸುಖಿಯು, ನಾನು ತರ್ಕ ವ್ಯಾಕರಣ ಅಮರ ಆಗಮ ಶಾಸ್ತ್ರ ಪುರಾಣದಲ್ಲಿ ಪ್ರೌಢನು. ನನ್ನ ಸೋಲಿಸುವರಾರು? ನಾನು ವೈದ್ಯಶಾಸ್ತ್ರದಲ್ಲಿ ಬಲ್ಲಿದನು, ನನಗೊಂದು ವ್ಯಾಧಿಯು ಮುಟ್ಟದು. ನಾನು ರಣಾಗ್ರದಲ್ಲಿ ಬಲವಂತನು, ನನ್ನ ಮೇಲೆ ಬೀಳುವರಾರು? ನಾನು ಎಂದೆಂದಿಗೂ ಪುಣ್ಯವಂತನು, ನನಗೆ ದರಿದ್ರ ಬಂದು ಸೋಂಕದು ನಾನು ಎಂದೆಂದಿಗೂ ಕ್ಷೀರಾಹಾರಿಯು, ಎನ್ನ ಭೋಗವ ತೊಲಗಿಸುವರಾರು? ನಾನು ಯಂತ್ರ ತಂತ್ರದಲ್ಲಿ ಬಲ್ಲಿದನು, ನನಗೆ ಒಂದು ಗ್ರಹ ಬಂದು ಸೋಂಕದು ಎಂದು ಹಮ್ಮಿನಿಂದ ಭ್ರಮೆಗೊಂಡಿತಯ್ಯ ಎನ್ನ ಬುದ್ಧಿಯೆಂಬ ಕರಣವು. ಇಂತಾ ದುಃಕರಣದ ಸಂಗದಿಂದ ಕಂದಿ ಕುಂದಿ ಕಂಗೆಟ್ಟೆನಯ್ಯ. ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ ಮತ್ಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.